ಇನ್ಸ್​ಪೆಕ್ಟರ್​, ಪತ್ನಿಗೆ ಸೇರಿದ ಬ್ಯಾಂಕ್​ ಲಾಕರ್​ ತೆರೆಯುತ್ತಿದ್ದಂತೆ ದಂಗಾದ ಎಸಿಬಿ ಅಧಿಕಾರಿಗಳು!

Inspector
Published on

ನಿಜಾಮಾಬಾದ್​: ನವೆಂಬರ್​ 25ರಂದು ತೆಲಂಗಾಣದ ಕಾಮರೆಡ್ಡಿ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ಗೆ ಸಂಬಂಧಿಸಿದ ಬ್ಯಾಂಕ್​ ಲಾಕರ್​ ತೆರೆದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ 34,40,200 ರೂ. ನಗದು ಮತ್ತು 9,12,800 ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.

ಇನ್ಸ್​ಪೆಕ್ಟರ್​ ಐ. ಜಗದೀಶ್​ರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅಡಿಯಲ್ಲಿ ಎಸಿಬಿ ಅಧಿಕಾರಿಗಳು ನ. 21ರಂದು ಬಂಧಿಸಿದ್ದರು. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು 5 ಲಕ್ಷ ರೂ. ಲಂಚ ತೆಗೆದುಕೊಂಡಿರುವ ಆರೋಪದಲ್ಲಿ ಜಗದೀಶ್​ರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದಾಗ ಇನ್ಸ್​ಪೆಕ್ಟರ್​ ಅಕ್ರಮವಾಗಿ ಸಂಪಾದಿಸಿದ್ದ ಹಣ ಪತ್ತೆಯಾಗಿದೆ.

ನ.8 ರಂದು ತೆಲಂಗಾಣ ಸರ್ಕಾರದ ಗೇಮಿಂಗ್​ ಕಾಯ್ದೆ ಅಡಿಯಲ್ಲಿ ಬಥುಲಾ ಸುಧಾಕರ್​ ಎಂಬಾತನ ವಿರುದ್ಧ ಕಾಮರೆಡ್ಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನವಾದ ದಿನದಂದೇ ಸುಧಾಕರ್​ ಬಿಡುಗಡೆಯಾಗಿದ್ದ. ಇದು ಲಂಚದ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಮಾಹಿತಿ ಪಡೆದು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಲಂಚಬಾಕ ಇನ್ಸ್​ಪೆಕ್ಟರ್​ ಸಿಕ್ಕಿಬಿದ್ದಿದ್ದಾನೆ.

ಸರ್ಕಾರಿ ಕೆಲಸವನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಂಡು ಕರ್ತವ್ಯಕ್ಕೆ ಇನ್ಸ್​ಪೆಕ್ಟರ್​ ಜಗದೀಶ್​ ಮೋಸವೆಸಗಿದ್ದಾನೆ. ಜಗದೀಶ್​ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಜಗದೀಶ್​ ಮತ್ತು ಆತನ ಪತ್ನಿ ಕಮಲೇಶ್ವರದಲ್ಲಿರುವ ಆ್ಯಕ್ಸಿಕ್​ ಬ್ಯಾಂಕ್​ ಲಾಕರ್​ ಉಪಯೋಗಿಸುತ್ತಿದ್ದರು ಎಂಬ ವಿಚಾರ ತನಿಖೆಯ ವೇಳೆ ಬಯಲಾದಾಗ, ಬ್ಯಾಂಕ್​ಗೆ ಭೇಟಿ ನೀಡಿ ಲಾಕರ್​ ತೆರೆದಾಗ ಎಸಿಬಿ ಅಧಿಕಾರಿಗಳಿಗೆ ನಗದು ಮತ್ತು ಚಿನ್ನಾಭರಣ ಸಿಕ್ಕಿದೆ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net