

ಮುಂಬೈ: ಬಾಲಿವುಡ್ ಕಿಂಗ್ ಖಾನ್, ನಟ ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ಮುಖ್ಯಭೂಮಿಕೆಯಲ್ಲಿ ನಟಿಸಿದ ಹಾಗೂ ಸ್ಟಾರ್ ನಿರ್ದೇಶಕರಾದ ರಾಜ್ಕುಮಾರ್ ಹಿರಾನಿ ನಿರ್ದೇಶಿಸಿದ 'ಡಂಕಿ', ಡಿ.21 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಸಿನಿಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ಗಳಿಸಿದ್ದು, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡಿದೆ. ಸಿನಿಮಾ ನಿರೀಕ್ಷಿಸಿದಂತೆ ಅಬ್ಬರಿಸದೆ ಹೋದರೂ ಕಥಾಹಂದರಕ್ಕೆ ತೆಗೆದುಕೊಂಡ ವಿಷಯ ಮತ್ತು ಅದನ್ನು ಚಿತ್ರಿಸಿದ ಪರಿಗೆ ನಿರ್ದೇಶಕರಿಗೆ ವಿಶೇಷ ಮೆಚ್ಚುಗೆ ವ್ಯಾಪಕವಾಗಿ ಲಭಿಸಿದೆ. ಈ ಬೆನ್ನಲ್ಲೇ ಇತ್ತೀಚೆಗೆ ಸಿನಿಮಾಗೆ ಸಂಬಂಧಿಸಿದಂತೆ ನಡೆಸಿದ ಸಂದರ್ಶನದಲ್ಲಿ ಹಿರಾನಿ ಹಲವು ಸಂಗತಿಗಳನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದ್ದಾರೆ.
ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿರುವ 'ಡಂಕಿ', ಇಂದಿಗೂ ದೇಶಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಲ್ಲಿಯವರೆಗೆ ಚಿತ್ರವು ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ. ಇನ್ನು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಹಿರಾನಿ, ನಾನು ಕೆಲವೊಮ್ಮೆ ನಿರೀಕ್ಷೆಗಳಿಗೆ ಹೆದರುತ್ತೇನೆ ಎಂದು ಹೇಳಿದ್ದಾರೆ.
“ನಿರೀಕ್ಷೆಗಳು ಸದಾ ಇರುತ್ತವೆ. ಕೆಲವೊಮ್ಮೆ ಅದಕ್ಕೆ ಹೆದರುತ್ತೇನೆ. ನಾನು ಈ ಹಿಂದೆ ಮಾಡಿದಂತಹ ಸಿನಿಮಾಗಳನ್ನು ಮಾಡಬೇಕೆಂದು ಜನ ಬಯಸುತ್ತಾರೆ. ಆದ್ರೆ, ಪ್ರತಿ ಕಥೆಯಲ್ಲಿ ವಿಭಿನ್ನತೆಯನ್ನು ಹುಡುಕಿ ಹೋಗುವ ನಾನು, ಅದರಂತೆಯೇ 'ಮುನ್ನಾಭಾಯ್ ಎಂಬಿಬಿಎಸ್', '3 ಈಡಿಯಟ್ಸ್', 'ಪಿಕೆ' ಮತ್ತು ಈಗ 'ಡಂಕಿ'ಯಂತಹ ಸಿನಿಮಾಗಳನ್ನು ಮಾಡಿಕೊಂಡು ಬಂದಿದ್ದೇನೆ" ಎಂದು ಹಿರಾನಿ ಹೇಳಿದರು.
“ಡಂಕಿ ಚಿತ್ರಕ್ಕೆ ಬಂದ ಪ್ರತಿಕ್ರಿಯೆ ನನಗೆ ತುಂಬ ಸಂತೋಷ ತಂದಿದೆ. ಬೇರೆಯವರು ಮಾಸ್ ಚಿತ್ರಗಳನ್ನು ಮಾಡುತ್ತಿರುವ ಈ ಸಮಯದಲ್ಲಿ ಡಂಕಿಯಂತಹ ಒಳ್ಳೆಯ ಕಂಟೆಂಟ್ ಮತ್ತು ಕಥೆಗೆ ಇಂತಹ ವಿಷಯಗಳನ್ನು ಆರಿಸಿಕೊಳ್ಳಲು ಧೈರ್ಯ ಬೇಕು. ಅದು ನಿಮಗಿದೆ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದು ನಿಜಕ್ಕೂ ನನಗೆ ಸಂತೋಷ ನೀಡಿದೆ" ಎಂದು ನಿರ್ದೇಶಕ ರಾಜ್ಕುಮಾರ್ ಹಿರಾನಿ ಖುಷಿಯ ಮಾತುಗಳನ್ನು ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).