ಯಾರೋ... CSK ನಾಯಕನ ಅವಮಾನಕರ ಹೇಳಿಕೆಗೆ ಖಡಕ್​ ತಿರುಗೇಟು ನೀಡಿದ RCB

Ruturaj Gaikwad
Published on

ಬೆಂಗಳೂರು:  18ನೇ ಆವೃತ್ತಿಯ ಐಪಿಎಲ್​ ಶುರುವಾಗುವುದಕ್ಕೆ ತಿಂಗಳುಗಳು ಬಾಕಿ ಉಳಿದಿದ್ದು, ಈಗಾಗಲೇ ತಂಡಗಳು ಟೂರ್ನಿಗೆ ಸಂಬಂಧಿಸಿದ ತಯಾರಿಯನ್ನು ಆರಂಭಿಸಿದೆ. 18ನೇ ಆವೃತ್ತಿಯಲ್ಲಿ ಕಪ್​ ಗೆಲ್ಲಲೇಬೇಕೆಂದು ಫ್ರಾಂಚೈಸಿಗಳು ಬಲಿಷ್ಠ ತಂಡವನ್ನೇ ಕಟ್ಟಿದ್ದು, ಆರ್​ಸಿಬಿ ತಂಡ ಕೂಡ ಒಂದಾಗಿದೆ. ಅಭಿಮಾನಿಗಳ ಬಹುವರ್ಷದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಆರ್​ಸಿಬಿ (RCB) ಫ್ರಾಂಚೈಸಿಯು ಈ ಬಾರಿಯ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರರನ್ನು ಖರೀದಿಸಿದ್ದು, ಬಲಿಷ್ಠ ಪಡೆಯನ್ನ ಕಟ್ಟುವ ಮೂಲಕ ಈ ಬಾರಿ ಕಪ್​ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ.

ಇನ್ನೂ ಐಪಿಎಲ್​ ಇತಿಹಾಸದಲ್ಲೇ ಆರ್​ಸಿಬಿ (RCB)  ಹಾಗೂ ಚೆನ್ನೈ (CSK) ಫ್ರಾಂಚೈಸಿಗಳು ಬದ್ಧವೈರರಿಗಳೆಂದು ಪರಿಗಣಿಸಿದ್ದು, ಪ್ರತಿಬಾರಿ ಹೈವೋಲ್ಟೇಜ್​ ಪಂದ್ಯ ನಡೆದಾಗಲೆಲ್ಲಾ ಟಿಆರ್​ಪಿ ಹಾಗೂ ವೀಕ್ಷಣೆ ವಿಚಾರವಾಗಿ ದಾಖಲೆ ಬರೆದಿದೆ. ಆದರೆ, ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಆರ್​ಸಿಬಿ ಕುರಿತಾಗಿ ಅವಮಾನಕರ ಹೇಳಿಕೆಯೊಂದನ್ನು ನೀಡಿದ್ದರು. ಈ ವಿಚಾರ ಆರ್​ಸಿಬಿ ಹಾಗೂ ಸಿಎಸ್​ಕೆ ಅಭಿಮಾನಿಗಳ ನಡುವಿನ ದೊಡ್ಡ ಜಟಾಪಟಿಗೆ ಕಾರಣವಾಗಿತ್ತು. ಇದೀಗ ಆರ್​ಸಿಬಿ ಸಿಎಸ್​ಕೆ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.

ಈಚೆಗೆ ನಡೆದ ವಿಜಯ್​ ಹಜಾರೆ ಟ್ರೋಫಿ ಸೆಮಿಫಿನಾಲೆ ಪಂದ್ಯದಲ್ಲಿ ವಿದರ್ಭ ಹಾಗೂ ಮಹಾರಾಷ್ಟ್ರ ತಂಡಗಳು ಮುಖಾಮುಖಿಯಾಗಿದ್ದವು. ಮಹಾರಾಷ್ಟ್ರ ಪರ ಕಣಕ್ಕಿಳಿದಿದ್ದ ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ 7 ರನ್​ಗಳಿಗೆ ಔಟ್​ ಆಗಿದ್ದರು. ಆರ್​ಸಿಬಿ ಆಟಗಾರ ಜಿತೇಶ್​ ಶರ್ಮ ಹಿಡಿದ ಅದ್ಭುತ ಕ್ಯಾಚ್​ಗೆ ಋತುರಾಜ್​ ಪೆವಿಲಿಯನ್​ನತ್ತ ಮುಖ ಮಾಡಿದ್ದರು. ಇದೀಗ ಈ ವಿಡಿಯೋವನ್ನು ಪೋಸ್ಟ್​ ಮಾಡಿ ಆರ್​ಸಿಬಿ ಫ್ರಾಂಚೈಸಿ It is someone from RCB ಎಂದು ಟ್ವೀಟ್​ಗೆ ಅಡಿಬರಹ ನೀಡುವ ಮೂಲಕ ಖಡಕ್​​ ತಿರುಗೇಟು ನೀಡಿದೆ. ಸದ್ಯ ಈ ಪೋಸ್ಟ್​ ವೈರಲ್​ ಆಗಿದೆ.

ಘಟನೆಯ ಹಿನ್ನೆಲೆ? 

ಕಳೆದ ವರ್ಷ ಡಿಸೆಂಬರ್​ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಎಸ್​ಕೆ ನಾಯಕ ಋತುರಾಜ್​ (Ruturaj Gaikwad) ಅವರನ್ನು ಮಾತನಾಡುವಂತೆ ವೇದಿಕೆಗೆ ಆಹ್ವಾನಿಸಲಾಗಿತ್ತು. ಈ ವೇಳೆ ಋತುರಾಜ್​ಗೆ ಪ್ರಶ್ನಗೆಳನ್ನು ಕೇಳಲಾಗಿತ್ತು. ಪ್ರಶ್ನೆಗೆ ಉತ್ತರಿಸಲು ಮುಂದಾದಾಗ ಋತುರಾಜ್​ ಅವರ ಮೈಕ್​ ಆಫ್​​​​ ಆಗಿತ್ತು. ಇದರಿಂದ ಋತುರಾಜ್​ಗೆ ತೀವ್ರ ಇರುಸುಮುರುಸು ಉಂಟಾಯಿತು.

ಈ ವಿಚಾರವಾಗಿ ನಿರೂಪಕರು ಮೈಕ್​ ಆಪರೇಟರ್​ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ತಕ್ಷಣವೇ ಉತ್ತರಿಸಿದ ಋತುರಾಜ್​ ಬಹುಶಃ ಅವರು ಆರ್​ಸಿಬಿಯಿಂದ (RCB) ಬಂದಿರಬೇಕು ಎಂದು ಹೇಳಿದ್ದರು. ಈ ವಿಡಿಯೋ ಆರ್​ಸಿಬಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಸ್ವತಃ ಫ್ರಾಂಚೈಸಿ ಸಿಎಸ್​ಕೆ ನಾಯಕನ ಹೇಳಿಕೆಗೆ ತಿರುಗೇಟು ನೀಡಿದ್ದು, ಈ ವಿಡಿಯೋ 1.9 ಮಿಲಿಯನ್​ಗಿಂತಲೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಈ ವಿಚಾರ ಐಪಿಎಲ್​ ಶುರುವಾಗುವುದಕ್ಕೂ ಮುನ್ನ ಆರ್​ಸಿಬಿ ಹಾಗೂ ಸಿಎಸ್​ಕೆ ಫ್ಯಾನ್ಸ್ ನಡುವಿನ ಜಟಾಪಟಿ ಜೋರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net