

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿಯಲ್ಲಿ ಉಂಟಾಗಿರುವ ಅನೇಕ ಸಮಸ್ಯೆಗಳ ಬಗ್ಗೆ ಅಧಿಕಾರಿಗಳೊಡಗೂಡಿ ಸ್ಥಳ ಪರಿಶೀಲನೆ ನಡೆಸಿದ ಸಂಸದ ಬ್ರಿಜೇಶ್ ಚೌಟ ನೈಜ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನವಿತ್ತರು.
ಹೆದ್ದಾರಿ ಇಲಾಖಾ ಯೋಜನಾ ನಿರ್ದೇಶಕ ಜಾವೇದ್ ಹಾಗೂ ಕೆಎನ್ಆರ್ ಸಂಸ್ಥೆಯ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಸಿಂಗ್ ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ಗುರುವಾರ ಪರಿಶೀಲನೆ ನಡೆಸಿದ ಸಂಸದ, ಹೆದ್ದಾರಿ ಕಾಮಗಾರಿಯಿಂದಾಗಿ ಪೇರಮೊಗೆರು ಎಂಬಲ್ಲಿ ದೇಂತಡ್ಕ ದೇವಾಲಯಕ್ಕೆ ಸಂಪರ್ಕ ರಸ್ತೆಯೇ ಇಲ್ಲದಂತಾಗಿರುವ ಬಗ್ಗೆ ಜನರ ಅಹವಾಲನ್ನು ಸ್ವೀಕರಿಸಿ ದೇವಾಲಯಕ್ಕೆ ಇರುವ ರಸ್ತೆಯನ್ನು ಹೆದ್ದಾರಿಯೊಂದಿಗೆ ಜೋಡಿಸಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಪೆರ್ನೆಯ ಕಡಂಬು ಎಂಬಲ್ಲಿ ಕೃಷಿಭೂಮಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಹಿಂದಿನ ಗುತ್ತಿಗೆದಾರ ಸಂಸ್ಥೆ ಅಳವಡಿಸಿದ್ದ ಮೋರಿಯನ್ನು ಈಗಿನ ಗುತ್ತಿಗೆದಾರ ಸಂಸ್ಥೆ ಮುಚ್ಚಿದೆ ಎಂಬ ಸ್ಥಳೀಯ ದೂರನ್ನು ಪರಿಶೀಲಿಸಿ, ಕೃಷಿಕರಿಗೆ ಅನುಕೂಲ ಕಲ್ಪಿಸುವ ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಲು ನಿರ್ದೇಶನವಿತ್ತರು. ಸತ್ತಿಕಲ್ನಿಂದ ಪೆರ್ನೆಯವರೆಗೆ ಡೈವರ್ಶನ್ ಕಲ್ಪಿಸಬೇಕೆಂಬ ಸ್ಥಳೀಯರ ಬೇಡಿಕೆಯ ನ್ಯಾಯೋಚಿತತೆ ಕಂಡುಕೊಂಡ ಸಂಸದರು ಈ ಬಗ್ಗೆಯೂ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ಮುಂದಾಳುಗಳಾದ ಪ್ರಸನ್ನ ಮಾರ್ಥ, ದಯಾನಂದ ಉಜಿರೆಮಾರ್, ಪುನೀತ್ ಮಾಡತ್ತಾರ್, ಶಿವಪ್ಪ ನಾಯ್ಕ, ನಿತೀಶ್ ಶಾಂತಿವನ, ಸಾಜಾ ರಾಧಾಕೃಷ್ಣ ಆಳ್ವ, ಸಂಜೀವ ಮಠಂದೂರು, ವಿದ್ಯಾಧರ ಜೈನ್, ಪುರುಷೋತ್ತಮ ಮುಂಗ್ಲಿಮನೆ, ಪ್ರಶಾಂತ್ ಶಿವಾಜಿನಗರ, ಚಂದ್ರಶೇಖರ್ ಬಪ್ಪಳಿಗೆ ಮೊದಲಾದವರು ಭಾಗವಹಿಸಿದ್ದರು.
ಅನವಶ್ಯಕ ಭೀತಿ ಬೇಡ
34ನೇ ನೆಕ್ಕಿಲಾಡಿಯಲ್ಲಿ ತಡೆಗೋಡೆ ಹಾಗೂ ಹೆದ್ದಾರಿ ಬದಿಯ ಈ ಹಿಂದಿನ ಚರಂಡಿಯನ್ನು ಪುನಃನಿರ್ಮಿಸಬೇಕೆಂಬ ಬೇಡಿಕೆಯನ್ನು ಪರಿಶೀಲಿಸಿದ ಸಂಸದ, ಕಾಮಗಾರಿ ನಡೆಯುವ ಮುನ್ನ ಅನವಶ್ಯಕ ಭೀತಿ ವ್ಯಕ್ತಪಡಿಸಬಾರದೆಂದೂ ವಿನಂತಿಸಿದರು. ಅಗತ್ಯವಿರುವಲ್ಲಿ ತಡೆಗೋಡೆ ನಿರ್ಮಿಸಲಾಗುತ್ತದೆ. ನಾಗರಿಕರು ತೋರಿಸಿದ ಸ್ಥಳದಲ್ಲಿ ತಡೆಗೋಡೆಯ ಅಗತ್ಯ ಕಂಡು ಬರುವುದಿಲ್ಲ. ಚರಂಡಿಯ ತ್ಯಾಜ್ಯ ನೀರು ಹೆದ್ದಾರಿಗೆ ಅಭಿಮುಖವಾಗಿ ಹರಿಯುವಂತಿಲ್ಲವೆಂದು ಹೇಳಿದರು.