

ಜಮ್ಮು- ಕಾಶ್ಮೀರ: ಜಮ್ಮು- ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಿಂದ ಭಾರತೀಯ ಸೇನೆಯ ಯೋಧ ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಕುಲ್ಗಾಮ್ ಜಿಲ್ಲೆಯ ಅಚಾತಲ್ ಪ್ರದೇಶದ ನಿವಾಸಿ ಜಾವೇದ್ ಅಹ್ಮದ್ ವಾನಿ (25) ಶನಿವಾರ ಸಂಜೆ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಡಾಖ್ ಪ್ರದೇಶದಲ್ಲಿ ನೇಮಕಗೊಂಡಿದ್ದ ವಾನಿ ರಜೆಯಲ್ಲಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಪಾರನ್ಹಾಲ್ನಲ್ಲಿ ಅವರ ಕಾರು ಪತ್ತೆಯಾಗಿದ್ದು ನಾಪತ್ತೆಯಾಗಿರುವ ಯೋಧನ ಪತ್ತೆಗೆ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿವೆ.
ಕೆಲವು ವರದಿಗಳು, ಅವರ ಕುಟುಂಬವನ್ನು ಉಲ್ಲೇಖಿಸಿ, ಕುಲ್ಗಾಮ್ ಜಿಲ್ಲೆಯಲ್ಲಿ ವಾನಿಯನ್ನು ಅವರ ವಾಹನದಿಂದ ಅಪಹರಿಸಲಾಗಿದೆ ಎಂದು ಹೇಳುತ್ತಿದ್ದರೂ ಅಪಹರಣದ ಸಾಧ್ಯತೆಯನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.
ವಾನಿ ಅವರು ದಿನಸಿ ವಸ್ತುಗಳನ್ನು ಖರೀದಿಸಲು ಚೋವಲ್ಗಾಮ್ಗೆ ಹೋಗಿದ್ದರು ಎಂದು ವರದಿಗಳು ಹೇಳಿವೆ. ಅವರು ಮನೆಗೆ ಹಿಂತಿರುಗದಿದ್ದಾಗ, ಅವರ ಕುಟುಂಬವು ಅವನನ್ನು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹುಡುಕಲು ಪ್ರಾರಂಭಿಸಿದೆ. ಶೋಧದ ವೇಳೆ ಪರಾನ್ಹಾಲ್ ಗ್ರಾಮದಲ್ಲಿ ಅವರ ಕಾರಿನಲ್ಲಿ ಅವರ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. (ಏಜೆನ್ಸೀಸ್)