

ನವದೆಹಲಿ: ಶ್ರದ್ಧೆ, ಶ್ರಮವಿದ್ದರೆ ಎಂಥಹವರೂ ಜೀವನದಲ್ಲಿ ಮುಂದೆ ಬರುತ್ತಾರೆ ಎಂಬ ಮಾತುಗಳನ್ನು ಕೇಳುತ್ತಿರುತ್ತೇವೆ. ಅದೇ ರೀತಿ ಇಲ್ಲೊಬ್ಬ ದೆಹಲಿಯ ಯುವಕ(Delhi entrepreneur) ಕನಸು ನನಸಾಗಬೇಕಾದರೆ ನಿದ್ದೆಯನ್ನು ತ್ಯಾಗ ಮಾಡಬೇಕು ಎಂದು ಮಾಡಿರುವ ಪೋಸ್ಟ್ ಗೆ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಪ್ರತಿಯೊಬ್ಬರ ಜೀವನವೂ ಅವರದೇ ಆಗಿದ್ದು, ಒಬ್ಬರ ಗುರಿಯನ್ನು ಮತ್ತೊಬ್ಬರ ಮೇಲೆ ಹೇರಬಾರದು ಎಂದು ನೆಟ್ಟಿಗರು ಪ್ರಹಾರ ನಡೆಸುತ್ತಿದ್ದಾರೆ.
ವರ್ಷಕ್ಕೆ 4.2 ಕೋಟಿ ರೂ. ಗಳಿಸುವ ಯಶಸ್ಸಿನ ಗುಟ್ಟು ಹೇಳಿದ ಉದ್ಯಮಿ ಕುಶಾಲ್ ಅರೋರಾ ತನ್ನ ಯಶಸ್ಸಿನ ಸೂತ್ರವನ್ನು ಹಂಚಿಕೊಂಡಿದ್ದಾನೆ. "ನನಗೆ 23 ವರ್ಷ ಮತ್ತು ವಾರ್ಷಿಕವಾಗಿ 5 ಲಕ್ಷ ಡಾಲರ್‌ಗಿಂತ ಹೆಚ್ಚು ಸಂಪಾದಿಸುತ್ತೇನೆ. ನನ್ನ ಓದುವ ದಿನಗಳಲ್ಲಿ ವಿದ್ಯಾರ್ಥಿಗಳು ಪಾರ್ಟಿ ಮಾಡಿ ಖುಷಿ ಪಡುತ್ತಿದ್ದರೆ, ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ದುಡಿಮೆಯಲ್ಲಿ ಕಳೆಯುತ್ತಿದ್ದೆ. ಬರ್ತ್ಡೇ, ಗೆಟ್ ಟುಗೆದರ್ ನಂತಹ ಕಾರ್ಯಕ್ರಮಗಳಿಂದ ದೂರವಿರುತ್ತಿದ್ದೆ. ಆಗೆಲ್ಲ ವೈಯಕ್ತಿಕ ಆಸೆಗಳನ್ನು ನಿಯಂತ್ರಿಸಿ ವೃತ್ತಿಗೆ ಆದ್ಯತೆ ನೀಡಿದ್ದೇನೆ ಎಂದು ವಿವರಿಸಿದ್ದಾನೆ. ಹೀಗಾಗಿ ನಿಮ್ಮ ಕನಸು ನನಸಾಗಲು ಸಂಭ್ರಮದ ಜೀವನ ನಿರ್ವಹಿಸುತ್ತಿದ್ದೀರಾ? ಎಂದು ನೆಟಿಜನ್‌ಗಳನ್ನು ಉದ್ದೇಶಿಸಿ ಆತ ಪೋಸ್ಟ್ ಮಾಡಿದ್ದಾರೆ.
ವಿದ್ಯಾರ್ಥಿಗಳು ಮತ್ತು ಯುವಕರಿಗೆ ಸ್ಫೂರ್ತಿ ನೀಡುವ ಈ ಪೋಸ್ಟ್‌ಗೆ ಜನರಿಂದ ಅನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿದೆ. ಹಣವೇ ಶಾಶ್ವತ ಎಂಬ ವಿಚಾರ ಹಬ್ಬಿಸಿದ್ದಕ್ಕೆ ನೆಟಿಜನ್‌ಗಳು ಅವರ ವಿರುದ್ಧ ಹರಿಹಾಯ್ದಿದ್ದಾರೆ.
"ನಿಮ್ಮ ಜೀವನ ನಿಮ್ಮದು, ಅವರ ಜೀವನ ಅವರದು. ಪ್ರತಿಯೊಬ್ಬರೂ ಜೀವನದಲ್ಲಿ ಕೋಟಿ ಗಳಿಸಲು ಬಯಸುವುದಿಲ್ಲ. ಏನೋ ಮಹತ್ತರವಾದ ಸಾಧನೆ ಮಾಡಿದವರಂತೆ ಡೋಲು ಬಾರಿಸಬೇಡಿ. ಕಷ್ಟಪಟ್ಟು ದುಡಿದಿದ್ದೀಯ, ಹಣ ಸಂಪಾದಿಸಿದ್ದೀಯ, ಈಗ ನಿನ್ನ ಇಷ್ಟದಂತೆ ಬಾಳು. ಅದಲ್ಲದೆ, ಯುವಕರ ಮೇಲೆ ಅನಗತ್ಯ ಒತ್ತಡ ಹೇರಬೇಡ’’ ಎಂದು ವ್ಯಕ್ತಿಯೊಬ್ಬರು ಕಟುವಾದ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ನೆಟ್ಟಿಗರು, “ಆ ವಯಸ್ಸಲ್ಲಿ ತುಂಬಾ ಎಂಜಾಯ್ ಮಾಡ್ತಿದ್ದೆ, ಈಗ ನಿಮಗಿಂತ ಜಾಸ್ತಿ ಸಂಪಾದನೆ ಮಾಡ್ತಾ ಇದ್ದೀನಿ" ಇದಕ್ಕೆ ನೀನೇನು ಹೇಳ್ತೀಯಾ? ಎಂದಿದ್ದಾರೆ. ಮತ್ತೊಬ್ಬರು "ಒಂದು ವಿಧಾನವು ನಿನಗೆ ಸರಿಹೊಂದುತ್ತದೆ ಎಂಬ ಕಾರಣಕ್ಕೆ ಎಲ್ಲರಿಗೂ ಒಂದೇ ರೀತಿಯ ಫಲಿತಾಂಶ ಸಿಗುತ್ತದೆ ಎಂಬ ನಿಯಮವಿಲ್ಲ. ಇದಕ್ಕೆ ಉದಾಹರಣೆ ಏನೆಂದರೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಲಕ್ಷಗಟ್ಟಲೆ ಜನ ಹೆಣಗಾಡುತ್ತಾರೆ. ಆದರೆ 11 ಮಂದಿಗೆ ಮಾತ್ರ ಸ್ಥಾನ ಸಿಗಲಿದೆ’’ ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲರಿಗೆ ಸಲಹೆ ನೀಡಲು ಹೋಗಿ ಯುವ ಉದ್ಯಮಿ ಟೀಕೆಗೆ ಗುರಿಯಾಗಿರುವುದಕ್ಕೆ ಬಹುತೇಕ ಮಂದಿ ದೇಶದಲ್ಲಿ ಪುಗಸಟ್ಟೆಯಾಗಿ ಸಿಗುವ ವಸ್ತು ಸಲಹೆ ಮಾತ್ರ ಎಂದು ಮುಗಿಬೀಳುತ್ತಿದ್ದಾರೆ.