

ಕಾರವಾರ: ಹೊನ್ನಾವರ ತಾಲೂಕಿನ ಕರಿಕುರ್ವಾ ಗ್ರಾಮದ ಎರಡು ಕುಟುಂಬಗಳಿಗೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಕ್ರಮ ವಹಿಸಬೇಕು ಎಂದು ಸಂತ್ರಸ್ತ ಕುಟುಂಬದವರು ಜಿಲ್ಲಾಧಿಕಾರಿ ಗಂಗುಬಾಯಿ ಮಾನಕರ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ 36 ಮನೆಗಳಿದ್ದು, ಅದರಲ್ಲಿ ಲಕ್ಷ್ಮೀ ಬೋಳ ಅಂಬಿಗ ಹಾಗೂ ನಾಲ್ವರು ಮಕ್ಕಳಿರುವ ಒಂದು ಕುಟುಂಬ ಹಾಗೂ ಅವರ ದಾಯಾದಿಗಳ ಇನ್ನೊಂದು ಕುಟುಂಬಕ್ಕೆ ಮಾತ್ರ ಕಳೆದ 6 ವರ್ಷಗಳಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಬೇರೆಯವರು ನಮ್ಮ ಕುಟುಂಬದ ಸದಸ್ಯರ ಜತೆ ಮಾತನಾಡುವುದಿಲ್ಲ. ಯಾರಾದರೂ ಮಾತನಾಡಿದರೆ ಅವರಿಂದ ಊರ ಮುಖಂಡರು 1 ಸಾವಿರ ರೂ. ದಂಡ ಆಕರಿಸುತ್ತಾರೆ.
ಊರಿನಲ್ಲಿ ನಡೆಯುವ ಮದುವೆ, ದೇವರ ಕಾರ್ಯಗಳಿಗೆ ನಮ್ಮೆರಡು ಮನೆಗಳಿಗೆ ಮಾತ್ರ ಆಹ್ವಾನ ನೀಡುವುದಿಲ್ಲ. ಸಾರ್ವಜನಿಕ ದೋಣಿಯಲ್ಲಿ ಸಂಚಾರ ಮಾಡಲು ಅವಕಾಶ ನೀಡುವುದಿಲ್ಲ.
ಇದನ್ನೂ ಓದಿ ಜಿಲ್ಲೆಯಲ್ಲಿ ಮಳೆಯಿಂದ 188 ಕೋಟಿ ರೂ. ಹಾನಿ
ಇತ್ತೀಚೆಗೆ ನಿಕ್ಕಿಯಾದ ನಮ್ಮ ಮಗನ ಮದುವೆ ಕಾರ್ಯವನ್ನೂ ಊರವರು ತಪ್ಪಿಸಿದ್ದಾರೆ. ಕಳೆದ ವರ್ಷ ಈ ಬಹಿಷ್ಕಾರದ ವಿಚಾರ ಹೊನ್ನಾವರ ಪೊಲೀಸ್ ಠಾಣೆ ಮೆಟ್ಟಿಲೇರಿ ಪ್ರಕರಣ ರಾಜಿಯಾಗಿತ್ತು.
ಈಗ ಮತ್ತೆ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಲಕ್ಷ್ಮೀ ಹಾಗೂ ಅವರ ಮೂವರು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು ಜಿಲ್ಲಾಧಿಕಾರಿ ಬಳಿ ತಮ್ಮ ಅಳಲು ತೋಡಿಕೊಂಡರು.
ಗ್ರಾಮದ ಗಂಗಾಮಾತಾ ದೇವಸ್ಥಾನಕ್ಕೆ ಗ್ರಾಮಸ್ಥರು ನೀಡಿದ ದೇಣಿಗೆಯ ಹಣದಲ್ಲಿ ದೇವಸ್ಥಾನ ಕಮಿಟಿಯು ಪ್ರತಿ ಮನೆಗೆ ಸಾಲ ಕೊಡುತ್ತದೆ. ಅದಕ್ಕೆ ಬಡ್ಡಿ ಆಕರಿಸುವ ವ್ಯವಸ್ಥೆ ಗ್ರಾಮದಲ್ಲಿದೆ.
2017 ರಲ್ಲಿ ನಮ್ಮ ಕುಟುಂಬದ ಅಂಗವಿಕಲ ಅಣ್ಣನೊಬ್ಬನಿಗೆ 14 ಸಾವಿರ ರೂ. ಸಾಲ ನೀಡಲಾಗಿತ್ತು. ಅದರ ಬಡ್ಡಿ 4200 ರೂ. ಸೇರಿ 18200 ರೂ.ಗಳನ್ನು ಪಾವತಿಸಲು ವಿಳಂಬವಾಯಿತು ಎಂಬ ಕಾರಣಕ್ಕೆ ಬಹಿಷ್ಕಾರ ಹಾಕಲಾಗಿದೆ. ಅಂದಿನಿಂದ ಇಂದಿನವರೆಗೂ ನಮ್ಮ ಗೋಳು ಮುಂದುವರಿದಿದೆ ಎಂದರು.