

Snapchat Love : ಇಬ್ಬರು ಮಕ್ಕಳ ತಾಯಿಯೊಬ್ಬಳು ತನಗಿಂತ ಕಿರಿಯ ವಯಸ್ಸಿನ ಯುವಕನ ಪ್ರೀತಿಯಲ್ಲಿ ಸಿಲುಕಿ ಇದೀಗ ಗಂಡನೂ ಇಲ್ಲದೆ ಮತ್ತು ಪ್ರಿಯಕರನೂ ಇಲ್ಲದೇ ಅತಂತ್ರ ಸ್ಥಿತಿಯಲ್ಲಿ ಸಿಲುಕಿರುವ ಘಟನೆ ತೆಲಂಗಾಣದ ಪೆದ್ದಪಲ್ಲಿ ಮಂಡಲದ ಅಪ್ಪಣ್ಣಪೇಟೆ ಗ್ರಾಮದಲ್ಲಿ ನಡೆದಿದೆ.
ಯುವಕನ ಪ್ರೀತಿಯಲ್ಲಿ ಮುಳುಗಿದ ಮಹಿಳೆ, ತನಗೆ ಇಬ್ಬರು ಮಕ್ಕಳಿದ್ದಾರೆ ಅನ್ನೋದನ್ನೇ ಮರೆತಿದ್ದಳು. ಪ್ರೀತಿಯ ವಿಚಾರ ಆಕೆಯ ಪತಿಗೆ ತಿಳಿದಾಗ, ಆತ ಆಕೆಯನ್ನು ಮನೆಯಿಂದ ಹೊರಗಾಕಿದ್ದಾನೆ. ತನ್ನ ಪತಿ ಮತ್ತು ಮಕ್ಕಳನ್ನು ಬಯಸದ ಆ ಮಹಿಳೆ ತನ್ನ ಗೆಳೆಯನನ್ನೇ ಮದುವೆಯಾಗಲು ನಿರ್ಧರಿಸಿದಳು. ಆದರೆ, ಗೆಳೆಯನು ಕೂಡ ಆಕೆಯಿಂದ ಅಂತರ ಕಾಯ್ದುಕೊಂಡಿದ್ದಾನೆ. ಇದೀಗ ತನ್ನನ್ನು ಮದುವೆಯಾಗಲೇಬೇಕೆಂದು ಒತ್ತಾಯಿಸಿ ಗೆಳೆಯನ ಮನೆಯ ಮುಂದೆ ಮಹಿಳೆ ಧರಣಿ ಕೂತಿದ್ದಾಳೆ.
ಅಂದಹಾಗೆ, ಆ ಮಹಿಳೆ ಹೆಸರು ಸಂಧ್ಯಾ. ಈಕೆ ಕರೀಂನಗರದ ನಿವಾಸಿ. ಈಗಾಗಲೇ ಆಕೆಗೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪೆದ್ದಪಲ್ಲಿ ಮಂಡಲದ ಅಪ್ಪಣ್ಣಪೇಟೆ ಗ್ರಾಮದ ನಿವಾಸಿ ಅರವಿಂದ್ ಎಂಬ ಯುವಕನನ್ನು ಸಂಧ್ಯಾ ಸ್ನ್ಯಾಪ್ಚಾಟ್ನಲ್ಲಿ ಭೇಟಿಯಾದಳು. ಈ ಭೇಟಿ ಪರಿಚಯಕ್ಕೆ ತಿರುಗಿ, ಪ್ರೇಮವಾಗಿ ಬದಲಾಯಿತು. ಇಬ್ಬರೂ ಒಂದು ವರ್ಷ ತಮ್ಮ ಸಂಬಂಧವನ್ನು ಮುಂದುವರೆಸಿದರು. ತನಗೆ ಇಬ್ಬರು ಮಕ್ಕಳಿದ್ದಾರೆ ಎಂಬುದನ್ನು ಮರೆತ ಸಂಧ್ಯಾ, ಯುವಕನನ್ನು ಆಳವಾಗಿ ಪ್ರೀತಿಸುತ್ತಿದ್ದಳು. ಸಂಧ್ಯಾಳ ಪತಿಗೆ ಈ ವಿಷಯ ತಿಳಿದಾಗ, ಆತ ಆಕೆಯನ್ನು ಮನೆಯಿಂದ ಹೊರಗಾಕಿದನು.
ಬುಧವಾರ (ಸೆ.17) ಸಂಧ್ಯಾ ಮಹಿಳಾ ಗುಂಪಿನೊಂದಿಗೆ ಅರವಿಂದ್ ಮನೆಗೆ ಆಗಮಿಸಿ ಪ್ರತಿಭಟಿನೆ ನಡೆಸಿದ್ದಾಳೆ. ಈ ವಿಷಯ ತಿಳಿದಾಗ ಇಡೀ ಗ್ರಾಮಸ್ಥರು ಆಶ್ಚರ್ಯಗೊಂಡರು. ಅಲ್ಲಿನ, ಸ್ಥಳೀಯರು ಈಗಾಗಲೇ ನಿನಗೆ ಇಬ್ಬರು ಮಕ್ಕಳಿದ್ದಾರೆ. ನೀನು ಮಾಡುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದಾಗ, ನನಗೆ ಅರವಿಂದ್ ಬೇಕೇ ಬೇಕು, ನಾನು ಆತನ ಜತೆಯಲ್ಲಿಯೇ ಇರುತ್ತೇನೆ ಎಂದು ಆಕೆ ಹೇಳಿದಳು.
ನನ್ನ ಪತಿ ನನ್ನನ್ನು ಮನೆಯಿಂದ ಹೊರಗಾಕಿದ್ದಾನೆ ಮತ್ತು ನನಗಿರುವ ಏಕೈಕ ಆಯ್ಕೆಯೆಂದರೆ ಅದು ಅರವಿಂದ್ ಎಂದು ಸಂಧ್ಯಾ ಹೇಳಿದಳು. ಅರವಿಂದ್ ನನ್ನನ್ನು ಮದುವೆಯಾಗುವುದಾಗಿ ಹೇಳುತ್ತಿದ್ದನು ಆದರೆ, ಆತನ ಪಾಲಕರು ಒಪ್ಪಲಿಲ್ಲ ಎಂದು ಆಕೆ ಹೇಳಿದಳು. ಅರವಿಂದ್ ತನ್ನನ್ನು ಮದುವೆಯಾಗಬೇಕು ಮತ್ತು ತನಗೆ ನ್ಯಾಯ ಒದಗಿಸಬೇಕೆಂದು ಗ್ರಾಮಸ್ಥರ ಬಳಿ ಒತ್ತಾಯಿಸಿದ್ದು, ಈ ಘಟನೆ ಪೆದ್ದಪಲ್ಲಿ ಮಂಡಲದಲ್ಲಿ ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ. (ಏಜೆನ್ಸೀಸ್)