

ನವದೆಹಲಿ: ಉತ್ತರ ಭಾರತದಲ್ಲಿ, ಶ್ರಾವಣ ಸೋಮವಾರವನ್ನು ಶಿವ ಪೂಜೆಗೆ ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ. ಶಿವನನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಆದರೆ ಶ್ರಾವಣ ಸೋಮವಾರದಂದು ಉತ್ತರ ಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ ಎಂಬ ಸುದ್ದಿ ಹೊರಬಿದ್ದಿದೆ.
ಹಮೀರ್ಪುರ ಜಿಲ್ಲೆಯ ದೇವಿಗಂಜ್ ಗ್ರಾಮದ ನಿವಾಸಿ ಮಿಥಿಲೇಶ್ ಕುಮಾರಿ ಯಾದವ್ ರಾಖಿ ಹಬ್ಬದಂದು ಮನೆಗೆ ಬಂದಿದ್ದರು. ಮಹಿಳೆ ಮಲಗಿದ್ದ ವೇಳೆ ಹಾವು ಕಾಲಿಗೆ ಸುತ್ತಿಕೊಂಡಿದೆ. ತನ್ನ ಕಾಲಿಗೆ ವಿಷಪೂರಿತ ಹಾವು ಸುತ್ತಿಕೊಂಡಿರುವುದನ್ನು ಕಂಡ ಮಹಿಳೆಗೆ ಶಿವನ ನೆನಪಾಯಿತು. ಹಾವನ್ನು ನೋಡುತ್ತಾ ಶಿವನನ್ನು ಧ್ಯಾನಿಸುತ್ತಿದ್ದಳು.
ಮಹಿಳೆಯ ಕಾಲಿಗೆ ಹಾವು ಸುತ್ತಿಕೊಂಡು ಸುಮಾರು 3 ಗಂಟೆಗಳ ಕಾಲ ಅಲ್ಲೇ ಇತ್ತು. ಹಾವಿಗೆ ಹೆದರದ ಮಹಿಳೆ ಹಾಗೆಯೇ ಕುಳಿತು ಶಿವನ ನಾಮಸ್ಮರಣೆ ಮಾಡುತ್ತಲೇ ಇದ್ದಳು. ಇದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಹಾವು ಹಿಡಿಯುವವರನ್ನು ಕರೆಸಿ ಮಹಿಳೆಯ ಕಾಲಿನಿಂದ ಹಾವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಈ ಘಟನೆಯ ವಿಡಿಯೋ ಹೊರಬಿದ್ದಿದೆ.
ಈ ಕುರಿತಾಗಿ ಮಾತನಾಡಿದ ಮಿಥಿಲೇಶ್ ಕುಮಾರಿ, ಕಾಲಿಗೆ ಹಾವು ಸುತ್ತಿಕೊಂಡಿರುವುದನ್ನು ಕಂಡು ಆರಂಭದಲ್ಲಿ ಭಯಗೊಂಡಿದ್ದೆ. ತನಗೆ ದೇವರ ಮೇಲೆ ಅಪಾರ ನಂಬಿಕೆ ಇದ್ದು, ಹಾವನ್ನು ಓಡಿಸುವ ಪ್ರಯತ್ನ ಮಾಡದೆ ಸುಮ್ಮನಿದ್ದೆ ಎಂದರು.
ಮಹಿಳೆಯ ಕಾಲಿಗೆ ವಿಷಪೂರಿತ ಹಾವು ಸುತ್ತಿಕೊಂಡಿದೆ ಆದರೆ ಯಾಕೆ ಕಚ್ಚಿಲ್ಲ ಎಂದು ಎಲ್ಲರೂ ಆಶ್ಚರ್ಯ ಪಡಿಸುವುದರ ಜತೆಗೆ ಕಾಮೆಂಟ್ ಮಾಡುತ್ತಿದ್ದಾರೆ.