ತನ್ನನ್ನು ಕಚ್ಚಿದ ಹಾವನ್ನು ತಿರುಗಿ ಕಡಿದ ವ್ಯಕ್ತಿ; ಇಬ್ಬರ ಕಚ್ಚಾಟದಲ್ಲಿ ಗೆದ್ದಿದ್ದು ಯಾರು ಗೊತ್ತಾ?

snake
Published on

ಪಟ್ನಾ: ಹಾವಿನ ದ್ವೇಷ 12 ವರ್ಷ ನನ್ನ ರೋಷ 100 ವರ್ಷ ಎಂಬ ಪ್ರಸಿದ್ದ ವಾಕ್ಯ ನಮ್ಮೆಲರಿಗೂ ತಿಳಿದಿದೆ. ಇದೀಗ ಈ ಸಾಲುಗಳಿಗೆ ಜೀವಂತ ಸಾಕ್ಷಿ ಎಂಬಂತೆ ವ್ಯಕ್ತಿಯೋರ್ವನಿಗೆ ಹಾವು ಕಚ್ಚಿದೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಆ ವ್ಯಕ್ತಿ ಹಾವನ್ನು ಕಚ್ಚಿದ್ದು, ಇಬ್ಬರ ಕಚ್ಚಾಟದಲ್ಲಿ ಯಾರು ಗೆದ್ದರು ಎಂದು ನಿಮಗೆ ಊಹಿಸಲೂ ಸಾಧ್ಯವಿಲ್ಲದಿರುವ ಘಟನೆ ಒಂದು ಬಿಹಾರದ ನವಾಡದ ರಾಜೌಲಿ ಪ್ರದೇಶದಲ್ಲಿ ನಡೆದಿದೆ.

ರಾಜೌಲಿಯಲ್ಲಿ ರೈಲ್ವೆ ಮಾರ್ಗ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಜಾರ್ಖಂಡ್​ ಮೂಲದ ಕಾರ್ಮಿಕ ಸಂತೋಷ್​ ಲೋಹರ್​ಎಂಬಾತ ಹಾವನ್ನು ಕಚಗಚಿ ಸೇಡು ತೀರಿಸಿಕೊಂಡಿದ್ದು, ಈ ಘಟನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಳಿಕ ಆತ ನೀಡಿದ ಸ್ಪಷ್ಟನೆ ಕೇಳಿ ಅಲ್ಲಿನ ಅಧಿಕಾರಿಗಳು ಶಾಕ್​ಗೆ ಒಳಗಾಗಿದ್ದು, ಹೀಗೂ ಮಾಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.

Snake Bite

ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ಎಂದಿನಂತೆ ಕೆಲಸ ಮುಗಿಸಿ ಸಂತೋಷ್​ ತನ್ನ ಕ್ಯಾಂಪ್​ನಲ್ಲಿ ಮಲಗಿದ್ದ. ರಾತ್ರಿ ಒಂದು ಹೊತ್ತಿನಲ್ಲಿ ವಿಷಕಾರಿ ಹಾವೊಂದು ಆತನಿಗೆ ಕಚ್ಚಿದ್ದು, ಇದರಿಂದ ಎಚ್ಚರಗೊಂಡ ಆತ ಕೂಗಿಕೊಳ್ಳುವ ಬದಲು ಸಿಟ್ಟಿನಿಂದ ಅದಕ್ಕೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದು, ಬಳಿಕ ಮೂರು ಬಾರಿ ಕಚ್ಚಿದ್ದಾನೆ. ಆ ವೇಳೆಗಾಗಲೇ ಹಾವು ಮೃತಪಟ್ಟಿದೆ.

ಆ ಬಳಿಕ ಶಬ್ದ ಆಗುತ್ತಿರುವುದನ್ನು ಕಂಡು ಕ್ಯಾಂಪ್​ನಲ್ಲಿದ್ದ ಇತರರು ನಿದ್ರೆಯಿಂದ ಎಚ್ಚರಗೊಂಡಿದ್ದು, ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಆತನ ಬಳಿ ಕೇಳಿದಾಗ ನನ್ನ ಹಳ್ಳಿಯಲ್ಲಿ ನಿಮಗೆ ಹಾವು ಕಚ್ಚಿದರೆ, ಆ ವಿಷವನ್ನು ತೆಗೆದುಹಾಕಲು ನೀವು ಅದಕ್ಕೆ ಎರಡು ಬಾರಿ ಕಚ್ಚಬೇಕು ಎಂಬ ನಂಬಿಕೆ ಇದೆ. ಹೀಗಾಗಿ, ನಾನು ಆ ಹಾವಿಗೆ ಕಚ್ಚಿದೆ ಎಂದು ಹೇಳಿದ್ದಾನೆ. ಕಾರ್ಮಿಕರ ಸುರಕ್ಷೆತೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net