

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ್ಕಕೆ ಸಂಬಂಧಿಸಿದ್ದಂತೆ ದರ್ಶನ್, ಪವಿತ್ರಾಗೌಡ ಸೇರಿದಂತೆ 10 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗದ ಅಪೋಲೋ ಫಾರ್ಮಸಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾ ಸ್ವಾಮಿ(33) ಸುಮನಹಳ್ಳಿ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಪವಿತ್ರಾ ಗೌಡಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದರು. ಈ ಕಾರಣಕ್ಕಾಗಿಯೇ ರೇಣುಕಾ ಸ್ವಾಮಿ ಕೊಲೆ ಆಗಿದೆ ಎನ್ನಲಾಗಿದೆ. ಇನ್ನು ದರ್ಶನ್ ಸೂಚನೆ ಮೇರೆಗೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎಂದು ಹೇಳಲಾಗುತ್ತಿದೆ.
ನಟ ದರ್ಶನ್ ಬಂಧನದ ಬಳಿಕ ಬಹುಭಾಷ ನಟಿ ಸಂಜನಾ ಗಲ್ರಾನಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುದ್ದಿ ನೋಡಿ ನನಗೆ ಶಾಕ್ ಆಗಿದೆ. ವಿಚಾರಣೆಗೆ ಕರೆದುಕೊಂಡಿರುವ ದರ್ಶನ್ ಅವರ ಬಂಧನ ಆಗಬಾರದು ಮತ್ತು ದರ್ಶನ್ ಅವರ ಹೆಸರು ಎಫ್ಐಆರ್ನಲ್ಲಿ ಇರಬಾರದೆಂದು ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಆದಷ್ಟು ಬೇಗೆ ಅವರ ವಿಚಾರಣೆ ಮುಗಿದು ಬಿಡುಗಡೆಯಾಗಲಿ ಎಂದು ಹೇಳಿದ್ದಾರೆ.