ಯುಪಿಎ ಆಡಳಿತ VS ಮೋದಿ ಸರ್ಕಾರ; ಚರ್ಚಿಸಲು ರೆಡಿನಾ? ರಾಹುಲ್ ಗಾಂಧಿಗೆ ಸ್ಮೃತಿ ಇರಾನಿ ನೇರ ಸವಾಲು

WhatsApp Image 2024-03-05 at 8.45.40 AM
Published on

ನವದೆಹಲಿ: ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನೇರ ಸವಾಲು ಎಸಗಿದ್ದು, 10 ವರ್ಷಗಳ ಯುಪಿಎ ಆಡಳಿತ ಮತ್ತು ನರೇಂದ್ರ ಮೋದಿ ಸರ್ಕಾರದ ನಡುವಿನ ವ್ಯತ್ಯಾಸದ ಬಗ್ಗೆ ಚರ್ಚೆ ನಡೆಸಲು ನೀವು ತಯಾರಿದ್ದೀರಾ? ಎಂದು ಹೇಳಿದ್ದಾರೆ.

ಸೋಮವಾರ (ಮಾ.04) ನಾಗ್ಪುರದಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಆಯೋಜಿಸಿದ್ದ 'ನಮೋ' ಯುವ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಸೃತಿ ಇರಾನಿ, "ನನ್ನ ಧ್ವನಿ ರಾಹುಲ್ ಗಾಂಧಿಯನ್ನು ತಲುಪುತ್ತಿದ್ದರೆ, ಅವರು ತಮ್ಮ ತೆರೆದ ಕಿವಿಯಿಂದ ಇದನ್ನು ಕೇಳಬೇಕು. ನಿಮ್ಮ (ಯುಪಿಎ) 10 ವರ್ಷ ಮತ್ತು ಮೋದಿ ಅವರ 10 ವರ್ಷಗಳ ನಡುವಿನ ವ್ಯತ್ಯಾಸವೇನು ಎಂಬುದರ ಕುರಿತು ಚರ್ಚೆಯಾಗಲಿ" ಎಂದರು.

"ಚರ್ಚಿಸಲು ಹೇಳಿದರೆ ರಾಹುಲ್ ಗಾಂಧಿ ಅವರು ಬರುವುದಿಲ್ಲ. ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನ ಮುಂದೆಯೂ ಅವರು ನಿಲ್ಲಲಾರರು. ಯುವಮೋರ್ಚಾದ ಒಬ್ಬ ಸಾಮಾನ್ಯ ಕಾರ್ಯಕರ್ತ ರಾಹುಲ್ ಎದುರು ಮಾತನಾಡಲು ಆರಂಭಿಸಿದರೂ ಆತ ಮಾತನಾಡುವ ಶಕ್ತಿ ಕಳೆದುಕೊಳ್ಳುವುದು ಗ್ಯಾರಂಟಿ. ಕಳೆದ 10 ವರ್ಷಗಳಲ್ಲಿ ಬಿಜೆಪಿ, ಪಕ್ಷದ ಪ್ರಣಾಳಿಕೆಯಲ್ಲಿ ಸಾರ್ವಜನಿಕರಿಗೆ ನೀಡಿದ್ದ ಮೂರು ಪ್ರಮುಖ ಭರವಸೆಗಳನ್ನು ಈಡೇರಿಸಿದೆ" ಎಂದು ಒತ್ತಿ ಹೇಳಿದರು.

"ಆಗಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿದ 370ನೇ ವಿಧಿಯ ರದ್ದತಿ, ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿ ಮತ್ತು ರಾಮಮಂದಿರ ನಿರ್ಮಾಣ ಇಷ್ಟು ಭರವಸೆಗಳನ್ನು ಇಂದು ಈಡೇರಿಸಲಾಗಿದೆ" ಎಂದು ಹೇಳುವ ಮೂಲಕ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net