ನಾಗರಿಕ ಸೇವೆಗಳಲ್ಲಿ ಅಂಗವಿಕಲರ ಕೋಟಾ ಯಾಕೆ? ಹಿರಿಯ ಐಎಎಸ್ ಅಧಿಕಾರಿ ಪ್ರಶ್ನೆ

ias
Published on

ಹೈದರಾಬಾದ್: ನಾಗರಿಕ ಸೇವೆಗಳಲ್ಲಿ ಅಂಗವಿಕಲರ ಕೋಟಾದ ಔಚಿತ್ಯವೇನಿದೆ ಎಂದು ಐಎಎಸ್​ ಅಧಿಕಾರಿ ಸ್ಮಿತಾ ಸಬರ್ವಾಲ್​ ಪ್ರಶ್ನಿಸಿದ್ದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ಮಹಾರಾಷ್ಟ್ರದ ವಿವಾದಿತ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಅಂಗವಿಕಲ ಪ್ರಮಾಣಪತ್ರದ ಕುರಿತು ಚರ್ಚೆಯಾಗುತ್ತಿರುವ ಬೆನ್ನಲ್ಲೇ ತೆಲಂಗಾಣ ಹಣಕಾಸು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿರುವ ಸ್ಮಿತಾ ಸಬರ್ವಾಲ್ ಅಂಗವಿಕಲರ ಮೀಸಲಾತಿ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಇದು ವಿವಾದಕ್ಕೆಡೆ ಮಾಡಿಕೊಟ್ಟಿದೆ.

ಅಂಗವಿಕಲರ ಬಗ್ಗೆ ನನಗೆ ಗೌರವವಿದೆ. ಆದರೆ ಯಾವುದಾದರೂ ವಿಮಾನಯಾನ ಸಂಸ್ಥೆ ಅಂಗವಿಕಲರನ್ನು ಪೈಲಟ್ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತದೆಯೇ? ಅಂಗವಿಕಲತೆ ಇರುವ ಸರ್ಜನ್‌ನಲ್ಲಿ ನೀವು ನಂಬಿಕೆ ಇರಿಸುತ್ತೀರಾ? ಎಂದು ಅವರು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ನಾಗರಿಕ ಸೇವಾ ಕೆಲಸದ ಸ್ವರೂಪವು ಕ್ಷೇತ್ರ ಕಾರ್ಯವಾಗಿದೆ. ಇದಕ್ಕೆ ಸದೃಢವಾದ ಮಾನಸಿಕ ಅಥವಾ ದೈಹಿಕ ಪ್ರಯತ್ನ ಅವಶ್ಯಕತೆಯಿರುತ್ತದೆ. ದೂರ ಪ್ರಯಾಣಿಸುವುದರ ಜತೆಗೆ ಜನರ ಅಹವಾಲುಗಳನ್ನು ನೇರವಾಗಿ ಆಲಿಸಬೇಕಿರುತ್ತದೆ. ಇಂತಹ ಪ್ರಮುಖ ಸೇವೆಗೆ ಕೋಟಾ ವ್ಯವಸ್ಥೆಯಾದರೂ ಯಾಕೆ ಇರಬೇಕು ಎಂದು ಸ್ಮಿತಾ ಪ್ರಶ್ನಿಸಿದ್ದಾರೆ.

ಇದರ ನಡುವೆ ಅನೇಕ ನೆಟಿಜನ್‌ಗಳು ಸ್ಮಿತಾ ಸಬರ್ವಾಲ್ ಅವರ ಕಾಮೆಂಟ್‌ಗಳನ್ನು ಖಂಡಿಸಿದ್ದಾರೆ. ಅಂಗವಿಕಲತೆಯೇ ಒಂದು ಶಕ್ತಿ. ಬುದ್ಧಿವಂತಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಪೋಸ್ಟ್ ನೋಡಿದಾಗ ತಿಳಿವಳಿಕೆ ಮತ್ತು ಜ್ಞಾನೋದಯ ಬಹಳ ಅವಶ್ಯಕ ಎಂದು ತೋರುತ್ತದೆ ಎಂದು ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕರುಣಾ ಪ್ರತಿಕ್ರಿಯಿಸಿದ್ದಾರೆ.

ಈ ಪೋಸ್ಟ್ ಅನ್ನು ನೋಡಿದಾಗ ಅಧಿಕಾರಿಗಳು ಹೇಗೆ ವರ್ತಿಸುತ್ತಿದ್ದಾರೆ? ಅವರ ಚಿಂತನೆ ಯಾವ ನಿಟ್ಟಿನಲ್ಲಿದೆ ಎಂಬುದು ಮನದಟ್ಟಾಗುತ್ತದೆ ಎಂದು ಸಂಸದ ಪ್ರಿಯಾಂಕಾ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net