ಕೋರಮಂಗಲದಲ್ಲಿ ಸ್ಮಾರ್ಟ್​ ನಿಲ್ದಾಣ ಬಿಬಿಎಂಪಿಗೆ ಹಸ್ತಾಂತರ

smart
Published on

ಬೆಂಗಳೂರು : ಸೇಪಿಯನ್ಸ್​ ಸಂಸ್ಥೆಯ ಕಾರ್ಪೋರೇಟ್​ ಸಾಮಾಜಿಕ ಜವಾಬ್ದಾರಿ (ಸಿಎಸ್​ಆರ್​) ನಿಧಿ ಅಡಿ ಶಿಲ್ಪಾ ಫೌಂಡೇಶನ್​ ಸಂಸ್ಥೆ, ಕೋರಮಂಗಲದ ಆಡುಗೋಡಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಸ್ಮಾರ್ಟ್​ ನಿಲ್ದಾಣವನ್ನು ಬಿಬಿಎಂಪಿಗೆ ಹಸ್ತಾಂತರಿಸಿದೆ.

ಇದಕ್ಕೂ ಮುನ್ನ ನೃಪತುಂಗ ರಸ್ತೆ, ಕಾಡುಬೀಸನಹಳ್ಳಿಯಲ್ಲಿ ಸ್ಮಾರ್ಟ್​ ನಿಲ್ದಾಣವನ್ನು ನಿರ್ಮಿಸಿ ಈಗಾಗಲೇ ಬಿಬಿಎಂಪಿಗೆ ಹಸ್ತಾಂತರಿಸಲಾಗಿದೆ. ಕೋಟ್ಯಂತರ ರೂ.ವೆಚ್ಚದಲ್ಲಿ ನಿರ್ಮಿಸಲಾದ ಒಟ್ಟು 3 ನಿಲ್ದಾಣವನ್ನು ಬಿಬಿಎಂಪಿ ಹಸ್ತಾಂತರಿಸಲಾಗಿದೆ. ಮಾಜಿ ಮಹಾಪೌರ ಮಂಜುನಾಥರೆಡ್ಡಿ ಸ್ಮಾರ್ಟ್​ ನಿಲ್ದಾಣ ಉದ್ಘಾಟಿಸಿದರು. ಸೇಪಿಯನ್ಸ್​ ಸಂಸ್ಥೆ ಮುಖ್ಯಸ್ಥರಾದ ಸುಶೀಲ್​ ಮಹ್ಲಾ, ನಿಶಾ ಹೆಗ್ಡೆ, ಶಿಲ್ಪಾ ಫೌಂಡೇಶನ್​ ಅಚ್ಚುತ್​ಗೌಡ ಸೇರಿ ಹಲವರು ಉಪಸ್ಥಿತರಿದ್ದರು.

ನಗರದ ಸಾರಿಗೆ ವ್ಯವಸ್ಥೆಯಲ್ಲಿ ಪರಿವರ್ತನೆ ತರಲು, ಸಾರ್ವಜನಿಕರಿಗೆ ಅನುಕೂಲಕರ ಕಲ್ಪಿಸುವ ಉದ್ದೇಶದಿಂದಾಗಿ ಶಿಲ್ಪಾ ಫೌಂಡೇಶನ್​, ನಗರದ 3 ಕಡೆಗಳಲ್ಲಿ ಸುಸಜ್ಜಿತ ಸ್ಮಾರ್ಟ್​ ಬಸ್ ನಿಲ್ದಾಣ ಅಭಿವೃದ್ಧಿಪಡಿಸಿದೆ. ನಿಲ್ದಾಣದಲ್ಲಿ 24/7 ಸಿಸಿ ಕ್ಯಾಮರಾ, ಪ್ಯಾನಿಕ್​ ಬಟನ್​ ಸೇರಿ ಇತರೆ ಮೂಲಸೌಕರ್ಯ ಕಲ್ಪಿಸಲಾಗಿದೆ. ಸಿಸಿ ಕ್ಯಾಮರಾಗಳು ಸ್ಥಳಿಯ ಪೊಲೀಸ್​ ಠಾಣೆಗೆ ಸಂಪರ್ಕ ಹೊಂದಿವೆ. ನಿಲ್ದಾಣದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ಅಪಾಯ ಉಂಟಾಗುವ ಸನ್ನಿವೇಶದಲ್ಲಿ ಪ್ಯಾನಿಕ್​ ಬಟನ್​ ಒತ್ತಿದಲ್ಲಿ ಸ್ಥಳಿಯ ಪೊಲೀಸ್​ ಠಾಣೆಗೆ ಸಂದೇಶ ತಲುಪಲಿದೆ. ಇದರಿಂದ ಕೆಲ ನಿಮಿಷದಲ್ಲಿ ಪೊಲೀಸ್​ ಸಿಬ್ಬಂದಿ ಆಗಮಿಸಿ ಅಪಾಯಕ್ಕೊಳಗಾದವರ ರಕ್ಷಣೆ ಮಾಡಲಿದ್ದಾರೆ.

ಅಲ್ಲದೆ, ನಿಲ್ದಾಣದಲ್ಲಿ ಸ್ಯಾನಿಟರಿ ಪ್ಯಾಡ್​ಗಳು ದೊರೆಯಲಿವೆ. ಕ್ಯೂ ಆರ್​ ಕೋಡ್​ ಸ್ಕ್ಯಾನ್ ಮಾಡುವ ಮೂಲಕ ಪ್ಯಾಡ್​ ಪಡೆಯಬಹುದು. ಮೊಬೈಲ್​, ಲ್ಯಾಪ್​ಟಾಪ್​ ಚಾರ್ಜಿಂಗ್​ಗೆ ಚಾರ್ಜಿಂಗ್​ ಪಾಯಿಂಟ್​ ಅಳವಡಿಸಲಾಗಿದೆ. ಸೆನ್ಸರ್​ ಬೇಸ್ಡ್​ ಡಸ್ಟ್​ ಬಿನ್​ ಇದೆ. ಒಣ ಮತ್ತು ಹಸಿ ತ್ಯಾಜ್ಯ ವಿಂಗಡಿಸಿ ತ್ಯಾಜ್ಯ ಶೇಖರಿಸಲಿದೆ. ನಾಲ್ಕು ಡಿಸ್​​​ಪ್ಲೇ ಇರಲಿದ್ದು, ಬಿಎಂಟಿಸಿ ಬಸ್​ಗಳ ಕಾರ್ಯಾಚರಣೆ ವಿವರ ದೊರೆಯಲಿದೆ. ಸಾರ್ವಜನಿಕರಿಗೆ ಉಪಯೋಗವಾಗುವ ಮಾಹಿತಿಯನ್ನು ಬಿಬಿಎಂಪಿ ಬಿತ್ತರಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net