

ಧಾರವಾಡ: ವೇಗದ ಮಿತಿ ಮೀರಿದ ಸ್ಕೋಡಾ ಕಾರು ರಭಸದಿಂದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಸೋಮಾಪೂರ ಗ್ರಾಮದಲ್ಲಿ ವರದಿಯಾಗಿದೆ.
ತಾಲೂಕಿನ ಸೋಮಾಪೂರ ಗ್ರಾಮದ ರಸ್ತೆಯಲ್ಲಿ ವೇಗವಾಗಿ ಕಾರನ್ನು ಚಲಾಯಿಸುತ್ತಿದ್ದ ಚಾಲಕ, ತನ್ನ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನ ಎರಡು ತುಂಡಾಗಿದ್ದು, ಕಾರಿನ ಎಂಜಿನ್ ಸೇರಿದಂತೆ ಇತರ ಸ್ಪೇರ್ ಪಾರ್ಟ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಅಪಘಾತದಲ್ಲಿ ಸಾವನ್ನಪ್ಪಿದ ಚಾಲಕನನ್ನು ಇಮ್ತಿಯಾಜ್ ಎಂದು ಗುರುತಿಸಲಾಗಿದ್ದು, ಹುಬ್ಬಳ್ಳಿ ಜಿಲ್ಲೆಯ ಕೇಶ್ವಾಪೂರದ ನಿವಾಸಿ ಎಂದು ಹೇಳಲಾಗಿದೆ. ಸ್ಥಳಕ್ಕೆ ಧಾವಿಸಿದ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.