

Sonam Wangchuk: ಲಡಾಖ್ನ ಲೇಹ್‌ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಇತರ ಬೇಡಿಕೆಗಳ ವಿರುದ್ಧ ನಡೆದ ಬೃಹತ್ ಪ್ರತಿಭಟನೆ ಹಿಂಸಾತ್ಮಕವಾಗಿ ತಿರುಗಿದ್ದು ನಾಲ್ಕು ಜನ ಮೃತಪಟ್ಟು, 80ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಆದರೆ ಈ ಕುರಿತಾಗಿ ಹವಾಮಾನ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರು ಲಡಾಖ್‌ನಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಕೊರತೆ ಮತ್ತು ಉದ್ಯೋಗ ರಹಿತತೆಯ ಹೆಚ್ಚಳವು ಸೂಕ್ಷ್ಮ ಗಡಿ ಪ್ರದೇಶದಲ್ಲಿ ಅಸ್ಥಿರತೆಯನ್ನು ಉಂಟುಮಾಡಬಹುದು ಎಂದು 2024ರಲ್ಲಿ ಎಚ್ಚರಿಸಿದ್ದರು.
2024 ರಲ್ಲಿ ಕುಲ್ಲುವಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸುಮಾರು 100 ಸ್ವಯಂ ಸೇವಕರೊಂದಿಗೆ ದೆಹಲಿಗೆ ಪಾದಯಾತ್ರೆ ನೇತೃತ್ವ ವಹಿಸಿದ ಸೋನಮ್ ಮಾತನಾಡಿ, ಲಡಾಖ್ನ ಜನರು ಆಡಳಿತದಲ್ಲಿ ಹೆಚ್ಚಿನ ಪಾತ್ರವನ್ನು ಬಯಸುತ್ತಿದ್ದಾರೆ ಎಂದು ಉಲ್ಲೇಖಿಸಿದ್ದರು.
ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಆದರೆ ನಮ್ಮ ಮೂಲ ಬೇಡಿಕೆ ಶಾಸಕಾಂಗದೊಂದಿಗೆ ಕೇಂದ್ರಾಡಳಿತ ಪ್ರದೇಶವಾಗಿತ್ತು. ಇದರಿಂದ ಅಲ್ಲಿನ ಸ್ಥಳೀಯರು ತಮ್ಮದೇ ಆದ ಪ್ರದೇಶವನ್ನು ಹೊಂದಲು ಸಹಾಯವಾಗುತ್ತಿತ್ತು. ಆದರೆ ಈಗ ಲಡಾಖ್ ಅನ್ನು ಅಧಿಕಾರಶಾಹಿ ನಡೆಸುತ್ತಿರುವುದರಿಂದ, ಸ್ಥಳೀಯ ಜನರು ಆಡಳಿತದಿಂದ ದೂರವಾಗಲಿದ್ದಾರೆಂದು 2024ರಲ್ಲಿಯೇ ಭವಿಷ್ಯ ನುಡಿದಿದ್ದರು.
ಲಡಾಖ್ನಂತಹ ಸೂಕ್ಷ್ಮ ಪ್ರದೇಶಕ್ಕೆ ಇದು ಅಪಾಯಕಾರಿ. ಏಕೆಂದರೆ ಒಂದೆಡೆ ಸರ್ಕಾರ ಸ್ಥಳೀಯ ಜನರಿಗೆ ಪ್ರಜಾಭುತ್ವವನ್ನು ನೀಡಿ ರೆಕ್ಕೆಗಳನ್ನು ಮುರಿದರೆ, ಮತ್ತೊಂದೆಡೆ ಉದ್ಯೋಗ ನೀಡದೆ ಅವರ ಕೈಗಳನ್ನು ಕತ್ತರಿಸಿದೆ. ಇದು ಸ್ಥಳೀಯ ಜನರ ಸ್ಥಿತಿಯನ್ನು ಹದಗೆಡಿಸುತ್ತಿದೆ. ಈ ರೀತಿಯಿಂದಾಗಿ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿರುವ ಲಡಾಖ್‌ನಲ್ಲಿ ಪರಿಸ್ಥಿತಿ ಸ್ಪೋಟವಾಗಬಹುದು ಎಂದು ಹೇಳಿದ್ದರು.
ಬುಧವಾರ ಏನಾಯಿತು?
ಲಡಾಖ್ನ ಲೇಹ್‌ನಲ್ಲಿ ರಾಜ್ಯ ಸ್ಥಾನಮಾನ ಮತ್ತು ಇತರ ಬೇಡಿಕೆಗಳ ವಿರುದ್ಧ ನಡೆದ ಬೃಹತ್ ಪ್ರತಿಭಟನೆ ಹಿಂಸಾತ್ಮಕವಾಗಿ ತಿರುಗಿದ ನಂತರ ಕನಿಷ್ಟ ನಾಲ್ಕು ಜನ ಮೃತಪಟ್ಟು, 80ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಯುವಕರ ಗುಂಪುಗಳು ಭದ್ರತಾ ವಾಹನ ಮತ್ತು ಇತರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಹಾಗೆಯೇ ಬಿಜೆಪಿ ಕಚೇರಿಯನ್ನು ಗುರಿಯಾಗಿಸಿಕೊಂಡು, ಒಂದು ಕಟ್ಟಡದೊಳಗಿನ ಪೀಠೋಪಕರಣಗಳು ಮತ್ತು ಕಾಗದಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಗುಂಡು ಹಾರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬೆಳಿಗ್ಗೆ ಸಂಭವಿಸಿದ ಈ ಘಟನೆಗಳನ್ನು ಹೊರತುಪಡಿಸಿ, ಲಡಾಖ್ನಲ್ಲಿನ ಪರಿಸ್ಥಿತಿಯನ್ನು ಸಂಜೆ 4 ಗಂಟೆಯೊಳಗೆ ನಿಯಂತ್ರಣಕ್ಕೆ ತರಲಾಗುವುದು. ಕೇಂದ್ರ ಸರ್ಕಾರವು ಸಾಕಷ್ಟು ಸಾಂವಿಧಾನಿಕ ಸುರಕ್ಷತೆಗಳನ್ನು ಒದಗಿಸುವ ಮೂಲಕ ಲಡಾಖ್ ಜನರ ಆಕಾಂಕ್ಷೆಗಳಿಗೆ ಬದ್ಧವಾಗಿದೆ ಎಂದು ಸಚಿವಾಲಯ ಹೇಳಿದೆ. (ಏಜೆನ್ಸೀಸ್)