ನವರಾತ್ರಿ ಹಬ್ಬದ ಸಂಭ್ರಮ: ಪೌರಕಾರ್ಮಿಕರೊಂದಿಗೆ ಇಂಡಿಯಾ ಸ್ವೀಟ್ ಹೌಸ್ ವಿಶೇಷ ಆಚರಣೆ

India Sweet House celebrates Navratri with civil servants Mandya
Published on

ಮಂಡ್ಯ: ವಾತಾವರಣ ಸ್ವಚ್ಛವಾಗಿರಲು ಪೌರಕಾರ್ಮಿಕರು ಕಾರಣ. ಆದ್ದರಿಂದ ಅವರ ಸೇವೆ ಅಳೆಯಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರಸಭೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಪೌರಕಾರ್ಮಿಕರಿಗೆ ಒದಗಿಸಿರುವ ಸೇವೆಗಳು ಹಾಗೂ ವೇತನವನ್ನು ಅವರು ಮಾಡುವ ಸೇವೆಗೆ ಲೆಕ್ಕ ಹಾಕಲು ಸಾಧ್ಯವಿಲ್ಲ. ನಿಷ್ಕಲ್ಮಶ ಮತ್ತು ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಸೂಕ್ತವಾಗಿ ನೋಡಿಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ. ಅದೇ ರೀತಿ ಪೌರಕಾರ್ಮಿಕರು ತಮ್ಮ ಕರ್ತವ್ಯ ನಿರ್ವಹಿಸುವುದರ ಜತೆಗೆ ಆರೋಗ್ಯದ ಕಡೆಯೂ ಗಮನಹರಿಸುವುದು ಹಾಗೂ ಸುರಕ್ಷತಾ ಸಮವಸ್ತ್ರ, ಸುರಕ್ಷತಾ ಪರಿಕರಗಳನ್ನು ಧರಿಸಿ ಕಾರ್ಯ ನಿರ್ವಹಿಸಬೇಕು. ಅನೇಕ ಪೌರಕಾರ್ಮಿಕರು ತಮ್ಮ ಮಕ್ಕಳ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಇದು ತಪ್ಪು ನಿರ್ಧಾರ. ಯಾರು ಸಹ ನಿಮ್ಮ ಮಕ್ಕಳ ಮೇಲೆ ಒತ್ತಡ ಏರಬೇಡಿ, ಅವರಿಗೆ ಉನ್ನತ ಶಿಕ್ಷಣವನ್ನು ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದರು ಕಿವಿಮಾತು ಹೇಳಿದರು.

ಪೌರಕಾರ್ಮಿಕರ ಹಿತಾಸಕ್ತಿ ಕಾಪಾಡಲು ಪ್ರತಿ ತಿಂಗಳು ಸಭೆ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸಿಕೊಳ್ಳಿ. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಲು ತಿಳಿಸಲಾಗಿದೆ. 32 ಜನ ಪೌರಕಾರ್ಮಿಕರು ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರನ್ನು ನೇರ ಪಾವತಿ ಅಡಿಯಲ್ಲಿ ತರಲು ಸೂಕ್ತ ಕ್ರಮವನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು. ಗೃಹಭಾಗ್ಯ ಯೋಜನೆಯಡಿ 88 ಮನೆ ನಿರ್ಮಾಣ ಮಾಡಲಾಗಿದೆ. ಇನ್ನು 16 ಮನೆಗಳ ಕಾಮಗಾರಿ ಅಂತಿಮ ಹಂತದಲ್ಲಿ ಇದೆ. ಪೌರಕಾರ್ಮಿಕರು ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕಾರ್ಯವನ್ನು ಶೀಘ್ರವಾಗಿ ನೀಡುತ್ತೇವೆ ಎಂದು ಹೇಳಿದರು.

ನಗರಾಭಿವೃದ್ಧಿ ಇಲಾಖೆ ಕೋಶಾಧಿಕಾರಿ ನರಸಿಂಹಮೂರ್ತಿ ಹಾಗೂ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ ಮಾತನಾಡಿದರು. ಉಪಾಧ್ಯಕ್ಷ ಎಂ.ಪಿ ಅರುಣ್‌ಕುಮಾರ್, ಸದಸ್ಯರಾದ ಶ್ರೀಧರ್, ರವಿ, ರಾಮಲಿಂಗಯ್ಯ, ಎಚ್.ಎಸ್.ಮಂಜು, ಪೌರಾಯುಕ್ತೆ ಪಂಪಶ್ರೀ, ಎಂ.ಬಿ.ನಾಗಣ್ಣಗೌಡ, ಮುತ್ತಾಲಯ್ಯ ಇತರರಿದ್ದರು. ಇದೇ ವೇಳೆ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಉತ್ತಮ ಸೇವೆ ಸಲ್ಲಿಸಿದವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಉನ್ನತ ವ್ಯಾಸಂಗ ಮಾಡುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಲಾಯಿತು.

ಇಂಡಿಯಾ ಸ್ವೀಟ್ ಹೌಸ್‌ನಿಂದ ಉಡುಗೊರೆ

ನವರಾತ್ರಿ ಹಬ್ಬದ ಅಂಗವಾಗಿ ಇಂಡಿಯಾ ಸ್ವೀಟ್ ಹೌಸ್‌ನಿಂದ ಕಾರ್ಯಕ್ರಮದಲ್ಲಿ 350 ಜನ ಪೌರ ಕಾರ್ಮಿಕರಿಗೆ ಉಡುಗೊರೆಯಾಗಿ ಸಿಹಿ ಪ್ಯಾಕೆಟ್ ವಿತರಣೆ ಮಾಡಲಾಯಿತು. ಜತೆಗೆ ತೀವ್ರ ಬಿಸಿಲಿನಿಂದ ರಕ್ಷಿಸಲು ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ಯಾಪ್‌ಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net