ಎಸ್‌ಐಟಿ ರಾಜ್ಯ ಸರ್ಕಾರದ ಕೈಗೊಂಬೆ

jds protest
ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಉಪ ತಹಸೀಲ್ದಾರ್ ನಾಗರ್‌ಜ್ ಅವರಿಗೆ ಮನವಿ ಸಲ್ಲಿಸಿದರು. ಎಂ.ಗಣಪತಿ, ಸಿ.ಪಿ.ತುಳಜಪ್ಪ, ಬಿ.ವಿ.ಪಾಟೀಲ್, ಕಲೀಮ್‌ವುಲ್ಲಾ, ಆರ್.ಕುಮಾರ್ ಇತರರಿದ್ದರು.
Published on

ಸೊರಬ: ಸಂಸದ ಪ್ರಜ್ವಲ್ ರೇವಣ್ಣ ಅವರದು ಎನ್ನಲಾದ ಪೆನ್‌ಡ್ರೈವ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ತಾಲೂಕು ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಉಪ ತಹಸೀಲ್ದಾರ್ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.

ಈ ಪ್ರಕರಣ ದುರುದ್ದೇಶಪೂರಿತ, ರಾಜಕೀಯ ಪ್ರೇರಿತವಾಗಿದೆ. ಆಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್‌ಡ್ರೈವ್‌ಗಳ ಹಂಚಿಕೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈವಾಡ ಇರುವ ಶಂಕೆ ಇದೆ. ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು. ಅಲ್ಲದೇ ರಾಜ್ಯ ಸರ್ಕಾರ ನೇಮಕ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎಂ.ಗಣಪತಿ ದೂರಿದರು.
ಎಸ್‌ಐಟಿ ಇಡೀ ಪ್ರಕರಣವನ್ನು ತಪ್ಪುದಾರಿಗೆ ಎಳೆಯುತ್ತ ದಿಕ್ಕುತಪ್ಪಿಸುತ್ತಿದೆ. ಕಾರ್ತಿಕ ಎಂಬುವರು ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿಡಿಯೋಗಳನ್ನು ಎಲ್ಲೆಡೆ ಸೋರಿಕೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇವನನ್ನು ಇನ್ನೂ ಬಂಧಿಸಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತೆಯರ ಮಾನಹಾನಿಗೆ ಕಾರಣವಾಗಿರುವ ವಿಡಿಯೋಗಳ ಹಂಚಿಕೆ ಮಾಡುವುದನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ. ಪ್ರಕರಣದಲ್ಲಿ ನೊಂದಿರುವ ಮಹಿಳೆಯರಿಗೆ ಬಹಳಷ್ಟು ಆಘಾತವಾಗಿದೆ. ಬಿಜೆಪಿ ಮುಖಂಡ ದೇವರಾಜೇಗೌಡ ಹಾಗೂ ಡಿ.ಕೆ.ಶಿವಕುಮಾರ ನಡುವೆ ನಡೆದ ಪೆನ್‌ಡ್ರೈವ್ ಸಂಭಾಷಣೆಯಿಂದ ಸಂಚು ಬಹಿರಂಗವಾಗಿದೆ. ಆದರೂ ಡಿ.ಕೆ.ಶಿವಕುಮಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿತಾಸಕ್ತಿಗೆ ಅನುಗುಣವಾಗಿ ಎಸ್‌ಐಟಿ ಕೆಲಸ ಮಾಡುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರ ತೇಜೋವಧೆ ಮಾಡಲು ಎಸ್‌ಐಟಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಕೊಡಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ತಾಲೂಕು ಉಪಾಧ್ಯಕ್ಷ ಸಿ.ಪಿ.ತುಳಜಪ್ಪ, ಪ್ರಧಾನ ಕಾರ್ಯದರ್ಶಿ ಬಿ.ವಿ.ಪಾಟೀಲ್, ಕಲೀಮ್‌ವುಲ್ಲಾ, ಆರ್.ಕುಮಾರ್, ರವಿ ಗಡವಿ, ವಿಷ್ಣುಮೂರ್ತಿ ಬಿಳವಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net