ಒಂಟಿ ವೃದ್ಧೆಯನ್ನು ಹತ್ಯೆಗೈದಾತ ಫೋನ್ ಕರೆ ಮಾಡಿ ಪೊಲೀಸ್ ಬಲೆಗೆ ಬಿದ್ದ

Nirmala Merry and Accused Ansari
Published on

ಬೆಂಗಳೂರು : ಬೊಮ್ಮನಹಳ್ಳಿಯಲ್ಲಿ ಡಿ.3ರಂದು ಹಾಡಹಗಲೇ ಒಂಟಿ ವೃದ್ಧೆ ನಿರ್ಮಲಾ ಮೇರಿ (65) ಎಂಬುವರನ್ನು ಹತ್ಯೆ ಮಾಡಿ, ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಅನ್ಸಾರಿ ಅಲಿಯಾಸ್ ಶಾಹುಲ್ ಹಮೀದ್ (29) ಬಂಧಿತ. ಆರೋಪಿಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ, ಮೊಬೈಲ್ ಜಪ್ತಿ ಮಾಡಲಾಗಿದೆ.

ಫೋನ್ ನಂಬರ್ ಸುಳಿವು ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿನ ಸಿಸಿ ಕ್ಯಾಮರಾ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲಿಸಲಾಗಿತ್ತು. ವ್ಯಕ್ತಿಯೊಬ್ಬ ಡಿ.2 ಮತ್ತು 3ರಂದು ದ್ವಿಚಕ್ರ ವಾಹನದಲ್ಲಿ ಅನುಮಾನಸ್ಪದವಾಗಿ ಬಂದು ಹೋಗಿರುವುದು ಕಂಡು ಬಂದಿತ್ತು. ನಿರ್ಮಲಾ ಅವರ ಫೋನ್ ಕರೆಗಳ ವಿವರ ಪರಿಶೀಲಿಸಿದಾಗ, ವ್ಯಕ್ತಿಯೊಬ್ಬ ಕರೆ ಮಾಡಿದ್ದ. ಈ ಸುಳಿವು ಆಧರಿಸಿ ತನಿಖೆ ಮುಂದುವರಿಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಬೊಮ್ಮನಹಳ್ಳಿಯ ಮುನೇಶ್ವರ ಲೇಔಟ್​ನಲ್ಲಿ ವಾಸವಿದ್ದ ನಿರ್ಮಲಾ ಮೇರಿ, ಮನೆಗೆ ಹೊಂದಿಕೊಂಡಂತೆ ಇರುವ ಮಳಿಗೆಯಲ್ಲಿ ಅಂಗಡಿ ಇಟ್ಟುಕೊಂಡಿದ್ದರು. ಪುತ್ರ ಕೇರಳದಲ್ಲಿ ಹಾಗೂ ಪುತ್ರಿ ಹೊರವಲಯದ ತಾವರಕೆರೆಯಲ್ಲಿ ಕುಟುಂಬದ ಜತೆ ನೆಲೆಸಿದ್ದಾರೆ. ತಾನು ವಾಸವಿದ್ದ ಕಟ್ಟಡದ ಮೇಲ್ಮಹಡಿಯಲ್ಲಿ ಖಾಲಿ ಇದ್ದ ಮನೆಯನ್ನು ಬಾಡಿಗೆಗೆ ನೀಡಲು ನಿರ್ಧರಿಸಿದ್ದರು.ಡಿ. 3ರಂದು ಬೆಳಗ್ಗೆ 11 ಗಂಟೆಯಲ್ಲಿ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ. ಅಂಗಡಿ ಬಾಗಿಲು ಅರ್ಧಕ್ಕೆ ತೆರೆದಿದ್ದು, ಸಂಜೆಯಾದರೂ ನಿರ್ಮಲಾ ಅಂಗಡಿಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಪಕ್ಕದ ಮನೆಯ ಮಹಿಳೆ ಹೋಗಿ ನೋಡಿದಾಗ ಹತ್ಯೆಯಾಗಿರುವುದು ಗೊತ್ತಾಗಿತ್ತು.

ಡಿ.2ರಂದು ನಿರ್ಮಲಾ ಅಂಗಡಿಗೆ ಬಂದು ಮನೆ ಬಾಡಿಗೆಗೆ ಕೇಳುವ ಸೋಗಿನಲ್ಲಿ ಆಕೆಯ ಹಿನ್ನೆಲೆ ತಿಳಿದುಕೊಂಡಿದ್ದ. ಫೋನ್ ನಂಬರ್ ಪಡೆದುಕೊಂಡು, ಮುಂಗಡ ಹಣ ನಾಳೆ ನೀಡುವುದಾಗಿ ಹೇಳಿ ಹೋಗಿದ್ದ. ನಿರ್ಮಲಾ ವ್ಯಾಪಾರ ಮಾಡಿಕೊಂಡು ಒಂಟಿಯಾಗಿ ನೆಲೆಸಿರುವುದು ಆರೋಪಿಗೆ ಗೊತ್ತಾಗಿತ್ತು. ಮರುದಿನ ನಿರ್ಮಲಾಗೆ ಕರೆ ಮಾಡಿದ್ದ ಆರೋಪಿ ಬಂದಿದ್ದ. ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಕೃತ್ಯ ಎಸಗಿದ್ದಾನೆ. ಆರೋಪಿಯು ಕೇರಳದಲ್ಲಿ 15ಕ್ಕೂ ಹೆಚ್ಚು ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನಗರಕ್ಕೆ ಬಂದು ಸರಗಳ್ಳತನದಲ್ಲಿ ತೊಡಗಿದ್ದ. ಪ್ರದೀಪ್ ಎಂಬಾತನ ಜತೆಗೂಡಿ ನಕಲಿ ನೋಟು ತಯಾರಿಸುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಪ್ರದೀಪ್​ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಬೊಮ್ಮನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net