ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್​, ಆರ್​ಜೆ ಶವವಾಗಿ ಪತ್ತೆ; Suicide ಎಂದು ಶಂಕಿಸಿದ ಪೊಲೀಸರು

Simran Singh
Published on

ನವದೆಹಲಿ: ಜಮ್ಮು-ಕಾಶ್ಮೀರ ಮೂಲದ ಖ್ಯಾತ ಸೋಶಿಯಲ್​ ಮೀಡಿಯಾ ಇನ್​​ಫ್ಲ್ಯೂಯೆನ್ಸರ್​, ರೇಡಿಯೋ ಜಾಕಿ ಸಿಮ್ರಾನ್​ ಸಿಂಗ್​ (25) ಗುರುಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ (Suicide) ಎಂದು ಶಂಕಿಸಿದ್ದಾರೆ.

ಪ್ರಸಿದ್ಧ ಸಾಮಾಜಿಕ ಜಾಲತಾಣ ಕೇಂದ್ರವಾದ ಇನ್ಸ್​ಟಾಗ್ರಾಂನಲ್ಲಿ ಏಳು ಲಕ್ಷಕ್ಕೂ ಅಧಿಕ ಫಾಲೋವರ್ಸ್​ಅನ್ನು ಹೊಂದಿರುವ ಸಿಮ್ರಾನ್​ ಡಿಸೆಂಬರ್​ 13ರಂದು ಕಡೆಯದಾಗಿ ರೀಲ್ಸ್​ ಒಂದನ್ನು ಮಾಡಿ ಅಪ್ಲೋಡ್​ ಮಾಡಿದ್ದರು. ಆ ಬಳಿಕ ಕಾಣೆಯಾಗಿದ್ದ ಸಿಮ್ರಾನ್​ ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿಯೊಬ್ಬರು, ಮೃತ ಯುವತಿಯು ಗುರುಗ್ರಾಮದ ಸೆಕ್ಟರ್​ 47ರಲ್ಲಿರುವ ಅಪಾರ್ಟ್​ಮೆಂಟ್​ ಒಂದರಲ್ಲಿ ಬಾಡಿಗೆಗೆ ಇದ್ದರು. ಆಕೆಯ ಜೊತೆ ವಾಸವಿದ್ದ ಸ್ನೇಹಿತೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Simran Singh

ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದು, ಸ್ಥಳದಲ್ಲಿ ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ಮೃತಳ ಕುಟುಂಬಸ್ಥರು ಕೂಡ ದೂರನ್ನು ದಾಖಲಿಸಿಲ್ಲ. ಕೆಲ ಸಮಯದಿಂದ ಸಿಮ್ರಾನ್​ ಮನನೊಂದಿದ್ದರು ಎಂದು ಆಕೆಯ ಕುಟುಂಬಸ್ಥರು ಹೇಳಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ಸ್​ಟಾಗ್ರಾಂನಲ್ಲಿ ಏಳು ಲಕ್ಷಕ್ಕೂ ಅಧಿಕ ಫಾಲೋವರ್ಸ್​ಅನ್ನು ಹೊಂದಿದ್ದ ಸಿಮ್ರಾನ್​ರನ್ನು ಜಮ್ಮು ಕಿ ಧಡ್ಕನ್ ಎಂದು ಕರೆಯಲಾಗುತ್ತಿತ್ತು. ಇದೀಗ ಅವರ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಮರುಗಿದ್ದು, ಸಂತಾಪ ಸೂಚಿಸಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net