ಕೇವಲ 40 ಜನರ ಸಮ್ಮುಖದಲ್ಲಿ ನಿಖಿಲ್​- ರೇವತಿ ಕಲ್ಯಾಣ!; ಕರೊನಾ ಹಿನ್ನೆಲೆ ಅದ್ದೂರಿತನ ಬದಿಗಿಟ್ಟು ಸರಳ ವಿವಾಹಕ್ಕೆ ತಯಾರಿ

nikhil
Published on

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಗೆ ಮದುವೆ ನಿಶ್ಚಯವಾಗಿರುವುದು ಗೊತ್ತಿರುವ ವಿಚಾರ. ಏಪ್ರಿಲ್ 17 ರಂದು ನಿಖಿಲ್ ಮತ್ತು ರೇವತಿ ಕಲ್ಯಾಣಕ್ಕೂ ದಿನಾಂಕವು ನಿಗದಿಯಾಗಿತ್ತು. ಅದ್ದೂರಿಯಾಗಿ ಮದುವೆ ಕಾರ್ಯ ನೆರವೇರಿಸುವ ಬಗ್ಗೆ ದೊಡ್ಡ ಯೋಜನೆ ಸಿದ್ಧಗೊಂಡಿತ್ತು. ಆದರೆ, ಕರೊನಾ ಆತಂಕದ ಹಿನ್ನೆಲೆಯಲ್ಲಿ ಅದ್ದೂರಿತನಕ್ಕೆ ಅಡ್ಡಿಯುಂಟಾಗಿದೆ. ಹಾಗಾದರೆ, ಮದುವೆ ಮುಂದೋಯ್ತಾ? ಹಾಗೇನು ಆಗಿಲ್ಲ. ಏ.17ರಂದೇ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಿಖಿಲ್​-ರೇವತಿ ಕಲ್ಯಾಣ ನೆರವೇರಲಿದೆ ಎನ್ನಲಾಗುತ್ತಿದೆ.
ಈ ಹಿಂದೆ ನಿಖಿಲ್-ರೇವತಿ ವಿವಾಹ ಮಹೋತ್ಸವ ರಾಮನಗರದಲ್ಲಿ ಇರುವ ಜಾನಪದ ಲೋಕದ ಹತ್ತಿರದ ಸಪ್ತಪದಿ ಮಂಟಪದಲ್ಲಿ ನೆರವೇರಲಿದೆ ಎನ್ನಲಾಗಿತ್ತು. ಇದೀಗ ಆ ಮದುವೆ ಸ್ಥಳವನ್ನೂ ಬದಲಾಯಿಸಲಾಗಿದೆ. ವಧು ರೇವತಿ ಅವರ ಮನೆಯಲ್ಲೇ ವಿವಾಹ ಕಾರ್ಯ ನೆರವೇರಲಿದ್ದು, ವರನ ಕಡೆಯಿಂದ 20 ಜನ, ವಧುವಿನ ಕಡೆಯಿಂದ 20 ಜನರಷ್ಟೇ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರಂತೆ. ಅದ್ದೂರಿತನವನ್ನು ಬದಿಗೊತ್ತಿ ಸರಳ ವಿವಾಹಕ್ಕೆ ಒತ್ತು ಕೊಡಲಾಗಿದೆ.
ಫೆಬ್ರವರಿ 10ರಂದು ಬೆಂಗಳೂರಿನ ತಾಜ್​ ವೆಸ್ಟ್ ಎಂಡ್​ನಲ್ಲಿ ಅದ್ದೂರಿಯಾಗಿ ನಿಖಿಲ್​ ಮತ್ತು ರೇವತಿ ನಿಶ್ಚಿತಾರ್ಥ ನೆರವೇರಿತ್ತು. ಚಿತ್ರರಂಗ ಸೇರಿ ರಾಜಕೀಯ ಗಣ್ಯರು ಆಗಮಿಸಿ ಜೋಡಿಗೆ ಶುಭ ಹಾರೈಸಿದ್ದರು. ಅಂದಹಾಗೆ, ಬೆಂಗಳೂರಿನ ವಿಜಯನಗರದ ಶಾಸಕ ಕೃಷ್ಣಪ್ಪ ಅವರ ಸಂಬಂಧಿ ಮಂಜುನಾಥ್ ಮತ್ತು ಶ್ರೀದೇವಿ ಅವರ ಪುತ್ರಿಯಾಗಿರುವ ರೇವತಿ, ಜ್ಯುವೆಲ್ಲರಿ ಡಿಸೈನಿಂಗ್ ನಲ್ಲಿ ಡಿಪ್ಲೋಮಾ ಕೋರ್ಸ್ ಮುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net