

ಬೆಂಗಳೂರು: ಕರೊನಾದಿಂದಾಗಿ ಸಿನಿಮಾರಂಗ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವವರಿಗೆ ಸ್ಯಾಂಡಲ್‌ವುಡ್ ಸ್ಪಂದಿಸುತ್ತಿದೆ. ನಿನ್ನೆಯಷ್ಟೇ ನಿಖಿಲ್ ಕುಮಾರಸ್ವಾಮಿ, ಸಿನಿಮಾ ಕಾರ್ಮಿಕರು ಮತ್ತು ಕಿರುತೆರೆ ಕಾರ್ಮಿಕರಿಗೆ ಸೇರಿ ಒಟ್ಟು 37 ಲಕ್ಷ ರೂ. ನೀಡಿದ್ದರು. ಅದೇ ರೀತಿ ಕಳೆದ ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿದ್ದ ಲೂಸಿಯಾ ಪವನ್ ಕುಮಾರ್, ಜಮೆಯಾದ ಹಣವನ್ನು ಹಂಚಿಕೆ ಮಾಡುತ್ತಿದ್ದಾರೆ. ಸಾರ್ವಜನಿಕರು, ಸಿನಿಮಾ ಕಲಾವಿದರು, ತಂತ್ರಜ್ಞರೆಲ್ಲರೂ ಸೇರಿ ಒಟ್ಟು 7ಲಕ್ಷ ಮೊತ್ತವನ್ನು ಅವಶ್ಯಕ ಇರುವವರಿಗೆ ನೇರವಾಗಿ ಅವರ ಖಾತೆಗೆ ಜಮೆ ಮಾಡುತ್ತಿದ್ದಾರೆ.
ಅಂದಹಾಗೆ, ಕೂಲಿಕಾರ್ಮಿಕರ ವಿವರಕ್ಕಾಗಿ ಒಟ್ಟು 800 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 350 ಜನರನ್ನು ಆಯ್ದುಕೊಂಡು ತಲಾ 2000 ಸಾವಿರ ನೀಡುವ ಕಾರ್ಯ ಶುರುವಾಗಿದೆ. ಈಗಾಗಲೇ 40 ಜನರ ಖಾತೆಗೆ ಹಣವನ್ನು ರವಾನಿಸಿದ್ದಾರೆ ಪವನ್ ಕುಮಾರ್.
‘ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ, ಸಿನಿಮಾ ಹಿಂದಿರುವ ಪಿಲ್ಲರ್‌ಗಳು ಅಂದರೆ, ಲೈಟ್ ಬಾಯ್ಸ, ಪ್ರೊಡಕ್ಷನ್ ಟೀಮ್, ಕೇಟರಿಂಗ್ ಹೀಗೆ ಪ್ರತಿಯೊಬ್ಬರೂ ಸಂಕಷ್ಟಕ್ಕೀಡಾಗಿದ್ದಾರೆ. ನಾವು ಪ್ಯಾಕ್ ಅಪ್ ಅಂದ ತಕ್ಷಣ ಕಾರ್ ಏರಿ ಹೊರಟು ಬಿಡುತ್ತೇವೆ. ಆದರೆ, ಅವರೆದ್ದೆಲ್ಲ ಹಾಗಲ್ಲ. ಒಂದು ದಿನದ ಕೂಲಿ ಮೇಲೆಯೇ ಅವರ ಜೀವನ ನಡೆಯುತ್ತಿರುತ್ತದೆ. ಅವರ ಕುಟುಂಬವೂ ಆ ಕೂಲಿಯನ್ನೇ ಆಧರಿಸಿರುತ್ತದೆ. ಅವರಿಗೆ ನಿವೃತ್ತಿ ಪಿಂಚಣಿ ಇಲ್ಲ. ಆರೋಗ್ಯ ವಿಮೆ ಇಲ್ಲ. ಸಿನಿಮಾವೊಂದೆ ಅವರಿಗೆಲ್ಲ. ಹಾಗಾಗಿ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂದುಕೊಂಡಾಗ. ಈ ಪ್ಲ್ಯಾನ್ ಹೊಳೆಯಿತು’ ಎಂಬುದು ಪವನ್ ಮಾತು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪವನ್ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.