

Rape: ಯುಕೆಯ ಓಲ್ಡ್‌ಬರಿ ಪಟ್ಟಣದಲ್ಲಿ ಇಪ್ಪತ್ತರ ಹರೆಯದ ಸಿಖ್ ಯುವತಿ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿ ಜನಾಂಗೀಯ ನಿಂದನೆ ಮಾಡಿದ್ದು, ನಿಮ್ಮ ದೇಶಕ್ಕೆ ವಾಪಸ್ ಹೋಗಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಶನಿವಾರ(ಸೆ.13) ವರದಿಯಾಗಿದೆ.
ಕಳೆದ ಮಂಗಳವಾರ ಬೆಳಿಗ್ಗೆ 8:30 ರ ಸುಮಾರಿಗೆ ಓಲ್ಡ್‌ಬರಿಯ ಟೇಮ್ ರಸ್ತೆಯ ಬಳಿ ಈ ಘಟನೆ ನಡೆದಿದೆ. ಪೊಲೀಸರು ಸಹ ಇದನ್ನು ಜನಾಂಗೀಯ ನಿಂದನೆ ಎಂದು ಪರಿಗಣಿಸಿದ್ದು, ಅತ್ಯಾಚಾರ ಎಸಗಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಯುಕೆ ಪೊಲೀಸರು, ದಾಳಿಕೋರರು ಜನಾಂಗೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಯುವತಿ ತಿಳಿಸಿದ್ದಾಳೆ. ಸಿಸಿಟಿವಿ ಮತ್ತು ವಿಧಿವಿಜ್ಞಾನ ವಿಚಾರಣೆಗಳು ನಡೆಯುತ್ತಿವೆ. ಬರ್ಮಿಂಗ್‌ಹ್ಯಾಮ್‌ಲೈವ್ ಶಂಕಿತರನ್ನು ಬಿಳಿ ಪುರುಷರು ಎಂದು ಗುರುತಿಸಿದೆ, ಒಬ್ಬರು ತಲೆ ಬೋಳಿಸಿಕೊಂಡು ಗಾಢ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದು, ಮತ್ತೊಬ್ಬ ಶಂಕಿತ ಬೂದು ಬಣ್ಣದ ಟಾಪ್ ಧರಿಸಿದ್ದರು ಎಂದು ಹೇಳಿದ್ದಾರೆ.
ಘಟನೆಯನ್ನು ಖಂಡಿಸಿರುವ ಬ್ರಿಟಿಷ್ ಸಂಸದೆ ಪ್ರೀತ್ ಕೌರ್ ಗಿಲ್, ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಜನಾಂಗೀಯ ನಿಂದನೆ ಅಂತಹ ಘಟನೆಗಳು ತೀವ್ರ ಕಳವಳಕಾರಿ. ದುಷ್ಕರ್ಮಿಗಳು ಆಕೆಗೆ ಇಲ್ಲಿಗೆ ಸೇರಿದವಳಲ್ಲ ಎಂದು ಹೇಳಿದ್ದಾರೆ. ಆದರೆ ಅವಳು ಈ ದೇಶಕ್ಕೆ ಸೇರಿದವಳು. ನಮ್ಮ ಸಿಖ್ ಸಮುದಾಯಕ್ಕೂ ಸೇರಿ ಪ್ರತಿಯೊಂದು ಸಮುದಾಯಕ್ಕೂ ಸುರಕ್ಷಿತ, ಗೌರವಾನ್ವಿತ ಮತ್ತು ಮೌಲ್ಯಯುತ ಭಾವನೆ ಹೊಂದುವ ಹಕ್ಕಿದೆ. ಓಲ್ಡ್‌ಬರಿಯಲ್ಲಿ ಅಥವಾ ಬ್ರಿಟನ್‌ನಲ್ಲಿ ಎಲ್ಲಿಯೂ ಜನಾಂಗೀಯತೆ ಮತ್ತು ಸ್ತ್ರೀದ್ವೇಷಕ್ಕೆ ಸ್ಥಾನವಿಲ್ಲ ಎಂದು ಹೇಳಿದ್ದಾರೆ.
ಇಲ್ಫೋರ್ಡ್ ಸೌತ್‌ನ ಮತ್ತೊಬ್ಬ ಸಂಸದ ಜಾಸ್ ಅಥ್ವಾಲ್, "ನೀಚ, ಜನಾಂಗೀಯ, ಸ್ತ್ರೀದ್ವೇಷಿ ದಾಳಿ" ಎಂದು ಕರೆದಿದ್ದು, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು.ಈ ದಾಳಿಯು ನಮ್ಮ ದೇಶದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಉದ್ವಿಗ್ನತೆಯ ಪರಿಣಾಮವಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)