

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಗುಜ್ಜಾಡಿ ಗ್ರಾಪಂನ ನಾಲ್ಕನೇ ವಾರ್ಡಿನ ಪಕ್ಕಿನಹಾಡಿ-ಕಂಚುಗೋಡು ಸಂಪರ್ಕಿತ ಮಣ್ಣಿನ ರಸ್ತೆ ನಿರಂತರ ಮಳೆಗೆ ಸಂಪೂರ್ಣ ಹದಗೆಟ್ಟಿದ್ದು, ಸಂಚರಿಸಲು ಜನ ಸಂಕಷ್ಟಪಡುವಂತಾಗಿದೆ.
ಗಂಗೊಳ್ಳಿ - ತ್ರಾಸಿ ಮುಖ್ಯ ರಸ್ತೆಯ ಕೊಡಪಾಡಿ ಬಸ್ ನಿಲ್ದಾಣ ಬಳಿಯಿಂದ ಪಕ್ಕಿನಹಾಡಿಗೆ ಸಂಚರಿಸುವ ರಸ್ತೆ ಇದು. ಸುಮಾರು 1 ಕಿ.ಮೀ. ದೂರದವರೆಗೆ ಮಣ್ಣಿನ ರಸ್ತೆಯಿದ್ದು, ಮಳೆಯಿಂದ ಹಾನಿಯಾಗಿದೆ. ಚರಂಡಿಗಳು ಇಲ್ಲದಿರುವುದರಿಂದ ಕೊಳಚೆ ಹಾಗೂ ಮಳೆ ನೀರು ರಸ್ತೆ ಮೇಲೆಯೆ ಹರಿಯುತ್ತಿದೆ. ಮಳೆ ನೀರು ರಸ್ತೆಯಲ್ಲೇ ಸಂಗ್ರಹಗೊಳ್ಳುತ್ತಿದ್ದು, ಹೊಂಡಗುಂಡಿಗಳ ನಿರ್ಮಾಣಕ್ಕೆ ಕಾರಣವಾಗುತ್ತಿದೆ.
ಸುಮಾರು 15-20 ಮನೆಯವರು ಪಕ್ಕಿನಹಾಡಿ-ಕಂಚುಗೋಡು ರಸ್ತೆಯನ್ನೇ ನಿತ್ಯ ಸಂಚಾರಕ್ಕೆ ಆಶ್ರಯಿಸಿದ್ದಾರೆ. ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ಕೆಸರಿನಲ್ಲೇ ತೆರಳುವ ದುಸ್ಥಿತಿ ಎದುರಾಗಿದೆ. ಮಾರ್ಗದ ಸಮಸ್ಯೆಯಿಂದ ಗ್ರಾಮಸ್ಥರು ಬೇಸತ್ತಿದ್ದು, ಗುಜ್ಜಾಡಿ ಗ್ರಾಪಂಗೆ ಮನವಿ ಸಲ್ಲಿಸಿದ್ದಾರೆ. ಶೀಘ್ರವೇ ರಸ್ತೆ ದುರಸ್ತಿ ಮಾಡಿ, ಜತೆಗೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿ ಕೊಡಬೇಕು. ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಪಕ್ಕಿನಹಾಡಿ ಭಾಗದ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪಕ್ಕಿನಹಾಡಿ- ಕಂಚುಗೋಡು ರಸ್ತೆಯ ಮಳೆಗೆ ಹದಗೆಟ್ಟ ಬಗ್ಗೆ ಗಮನಕ್ಕೆ ಬಂದಿದ್ದು, ಮಳೆ ಕಡಿಮೆಯಾದ ಕೂಡಲೇ ಪಂಚಾಯಿತಿಯಿಂದ ಮಳೆ ನೀರು ಸರಾಗ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗುವುದು. ಇದಲ್ಲದೆ ಸದ್ಯ ಸಂಚರಿಸಲು ಅನುಕೂಲವಾಗುವಂತಹ ವ್ಯವಸ್ಥೆ ಮಾಡಲಾಗುವುದು. ರಸ್ತೆ ಅಭಿವೃದ್ಧಿಗೆ ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲಾಗುವುದು -ತಮ್ಮಯ್ಯ ದೇವಾಡಿಗ ಗುಜ್ಜಾಡಿ ಗ್ರಾಪಂ ಅಧ್ಯಕ್ಷ
-ತಮ್ಮಯ್ಯ ದೇವಾಡಿಗ ಗುಜ್ಜಾಡಿ ಗ್ರಾಪಂ ಅಧ್ಯಕ್ಷ