ಯಂತ್ರಧಾರಣೆ ಮಂಚದ ಮೇಲೆ ಮೊದಲ ಬಾರಿಗೆ ಆಸೀನರಾದ ಸಿದ್ದಲಿಂಗ ಶ್ರೀಗಳು

siddaganga mat- yantadharane
Published on

ತುಮಕೂರು: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಕೂರುತ್ತಿದ್ದ ಯಂತ್ರಧಾರಣೆ ಮಂಚದ ಮೇಲೆ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಮೊದಲ ಬಾರಿಗೆ ಆಸೀನರಾಗಿ ಗುರುವಾರ ಭಕ್ತರಿಗೆ ದರ್ಶನ ನೀಡಿದರು.

ಶ್ರೀಗಳು ಲಿಂಗೈಕ್ಯರಾದ ಬಳಿಕ, ಯಂತ್ರಧಾರಣೆ ಮಂಚದ ಪಕ್ಕದಲ್ಲಿ ಕುರ್ಚಿ ಮೇಲೆ ಕುಳಿತುಕೊಂಡು ಹಿರಿಯ ಶ್ರೀಗಳ ಹಾದಿಯಲ್ಲೇ ಯಂತ್ರಧಾರಣೆ ಮಾಡುವುದು, ಕಾಯಿ ಮಂತ್ರಿಸಿಕೊಡುವ ಕಾರ್ಯ ಮುಂದುವರಿಸಿಕೊಂಡು ಬಂದಿದ್ದರು. ಇದನ್ನೂ ಓದಿರಿ

ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ಭಕ್ತರು, ಸಾರ್ವಜನಿಕರು ಶ್ರೀಮಠಕ್ಕೆ ಬಂದು ಶ್ರೀಗಳಿಂದ ಯಂತ್ರಧಾರಣೆ ಮಾಡಿಸಿಕೊಂಡು ಹೋಗುವುದು ವಾಡಿಕೆಯಾಗಿತ್ತು. ಗುರುವಾರ ಮಹಾಲಯ ಅಮಾವಾಸ್ಯೆಯಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಯಂತ್ರಧಾರಣೆ ಮಂಚದ ಮೇಲೆ ಕುಳಿತುಕೊಂಡು ಯಂತ್ರ ಬರೆಯುವುದು, ಮಂತ್ರಿಸಿದ ದಾರ ಕಟ್ಟುವುದು ಹಾಗೂ ಕಾಯಿಗಳನ್ನು ಮಂತ್ರಿಸಿಕೊಡುವ ಕಾರ್ಯ ಮುಂದುವರಿಸಿದರು. ಯಂತ್ರಧಾರಣೆ ಮಂಚಕ್ಕೆ ಹೊಂದಿಕೊಂಡಂತೆ ಹಿರಿಯ ಶ್ರೀಗಳ ಕಂಚಿನ ಪುತ್ಥಳಿ ಇಡಲಾಗಿದೆ.

2018ರ ಡಿಸೆಂಬರ್​ 1ರಂದು ಶಿವಕುಮಾರ ಶ್ರೀಗಳು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರುವ ಮುನ್ನ ಈ ಯಂತ್ರಧಾರಣೆ ಮಂಚದ ಮೇಲೆ ಕುಳಿತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net