ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಎಂಬುದು ಶೂನ್ಯವಾಗಿದ್ದು, ರಾಜ್ಯದ ಪಾಲಿಗೆ ಕಾಂಗ್ರೆಸ್ ಮರಣ ಶಾಸನ ಬರೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗಂಭೀರ ಆರೋಪ ಮಾಡಿದರು.
ಇದನ್ನೂ ಓದಿ: ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣದ ಸಾಕ್ಷ್ಯಗಳನ್ನು ತಿರುಚಲಾಗಿದೆ; ಹಿರಿಯ ವೈದ್ಯರಿಂದ ಆರೋಪ
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದುಬಿದ್ದಿದೆ. ಗ್ಯಾರಂಟಿಯಿಂದ ಹಣಕಾಸು ಹೊಂದಿಸಲು ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯ ಕುಂಟಿತವಾಗಿವೆ ಎಂಬುದನ್ನು ಸ್ವತಃ ರಾಜ್ಯ ಆಡಳಿತ ಸುಧಾರಣಾ ಅಧ್ಯಕ್ಷ, ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರೇ ಒಪ್ಪಿಕೊಂಡಿರುವುದೇ ಅದಕ್ಕೆ ಸಾಕ್ಷಿ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದೆ: ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಅಭಿವೃದ್ಧಿ ಇನ್ನೂ ಶುರುವೇ ಆಗಿಲ್ಲ. ಯಾವುದೇ ವಿಧಾನಸಭಾ ಕ್ಷೇತ್ರಗಳಿಗೂ ಅನುದಾನ ಕೊಡುತ್ತಿಲ್ಲ. ಈಗಾಗಲೇ ವಾಲ್ಮೀಕಿ ಹಗರಣವನ್ನು ಸದನದಲ್ಲಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ಇಡಿ(ಜಾರಿ ನಿರ್ದೇಶನಾಲಯ) ವಶದಲ್ಲಿದ್ದಾರೆ. ಅದರ ಬೆನ್ನಲ್ಲೇ ಮುಡಾ(ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣ ಸಿದ್ದರಾಮಯ್ಯ ಅವರನ್ನೇ ಸುತ್ತಿಕೊಂಡಿದೆ ಎಂದು ದೂರಿದರು.
ಇಷ್ಟೆಲ್ಲ ಬೆಳವಣಿಗೆ ನಡುವೆ ಸಿದ್ದರಾಮಯ್ಯ ಸರ್ಕಾರ ಹಿಂದು ವಿರೋಧಿ ಆಗಿರುವುದು ದುರ್ವೈವದ ಸಂಗತಿ. ಮಂಡ್ಯ ಜಿಲ್ಲೆಯ ನಾಮಮಂಗಲದ ಘಟನೆ ಬೆನ್ನೆಲ್ಲೇ ಪಾಂಡವಪುರದಲ್ಲೂ ಅಂತಹದೊಂದು ಘಟನೆ ನಡೆದಿದೆ. ಆರ್‌ಎಸ್‌ಎಸ್ ಕಚೇರಿಗೆ ಪೊಲೀಸರು ನುಗ್ಗಿ ಸಂಘದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದು ಖಂಡನೀಯವಾಗಿದ್ದು ಸಂಘದ ಕಚೇರಿಗೆ ನುಗ್ಗಿದವರು ಪೊಲೀಸರಲ್ಲ, ಪುಡಾರಿಗಳು ಎಂದು ಕಿಡಿಕಾರಿದರು.
ದುಷ್ಟಶಕ್ತಿ ಮಟ್ಟ ಹಾಕದ ರಣಹೇಡಿ ಸರ್ಕಾರ: ರಾಜ್ಯದಲ್ಲಿರುವ ದುಷ್ಟಶಕ್ತಿಯನ್ನು ಮಟ್ಟ ಹಾಕಲು ಸಾಧ್ಯವಾಗದ ರಣಹೇಡಿ ಇದಾಗಿದೆ. ರಾಜ್ಯದಲ್ಲಿ ಯಾವುದೇ ಘಟನೆ ನಡೆದರೂ ಸಣ್ಣಪ್ರಮಾಣದಲ್ಲಿ ಆಗಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಾಡುತ್ತಿದ್ದಾರೆ. ಗೃಹ ಸಚಿವರ ಈ ನಡೆ ದೇಶದ್ರೋಹಿಗಳಿಗೆ ಮತ್ತಷ್ಟು ಬಲ ಕೊಟ್ಟಂತಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದರು. ಸಿದ್ದರಾಮಯ್ಯ ಅವರು ತಾವು ನಾಡಿನ ಸಿಎಂ, ಪರಮೇಶ್ವರ್ ಅವರು ಗೃಹ ಸಚಿವರು ಎಂಬುದನ್ನು ಮರೆತಿದ್ದಾರೆ. ಅವರಿಬ್ಬರು ಒಂದು ಧರ್ಮದವರನ್ನು ಓಲೈಸುತ್ತಿದ್ದಾರೆ. ಈಗಾಗಲೇ ಇಬ್ಬರೂ ಎಚ್ವೆತ್ತುಕೊಳ್ಳಬೇಕು. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕೊರೆದೊಯ್ಯಬೇಕು ಎಂದು ಮನವಿ ಮಾಡಿದರು.
ಹೆಂಡತಿ ಜೊತೆ ಜಗಳವಾಡಿ ನದಿಗೆ ಹಾರಿದ ಗಂಡ! ಶವ ಹುಡಕಲು ಪೊಲೀಸರ ಹರಸಾಹಸ