

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಸದ್ಯಕ್ಕೆ ವರುಣಾ, ಬಾದಾಮಿ ಹಾಗೂ ಕೋಲಾರ ಮೂರು ಕ್ಷೇತ್ರಗಳ ಆಯ್ಕೆ ಸಿದ್ದರಾಮಯ್ಯರ ಮುಂದಿದೆ. ಈ ಬಾರಿ ಕೋಲಾರದಿಂದ ಸ್ಪರ್ಧಿಸುವಂತೆ ಭಾರಿ ಒತ್ತಡ ಬಂದಿದ್ದು, ಅಲ್ಲಿನ ಜನರ ನಾಡಿಮಿಡಿತ ಅರಿಯುವ ಸಲುವಾಗಿ ಇಂದು ಕೋಲಾರಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಸುಮಾರು 300 ಕೆಜಿ ಆಪಲ್ ಹಾರ ಹಾಕಿ ಕ್ರಿಶ್ಚಿಯನ್ ಮುಖಂಡರು ಸ್ವಾಗತ ಕೋರಿದ್ದಾರೆ.
ಚುನಾವಣಾ ಪ್ರಚಾರಕ್ಕೆಂದು ಸಿದ್ದಪಡಿಸಿರುವ ವಿಶೇಷ ಬಸ್ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ತೆರಳಿದ್ದಾರೆ. ಚುನಾವಣಾ ಸಮಯ ಹತ್ತಿರವಾಗುತ್ತಿದ್ದು, ಪ್ರಚಾರ ಆರಂಭಿಸಲು ರಾಜಕೀಯ ಪಕ್ಷಗಳು ಹಾಗೂ ಹಿರಿಯ ನಾಯಕರು ತಮ್ಮದೇ ಆದಂತಹ ಯೋಜನೆ ರೂಪಿಸಿಕೊಳ್ಳುತ್ತಿದ್ದಾರೆ.
ಇದೀಗ ಚುನಾವಣಾ ಪ್ರಚಾರಕ್ಕೆ ತೆರಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಶೇಷ ಐಷಾರಾಮಿ ಬಸ್ಸು ಸಿದ್ಧವಾಗಿದೆ. ಈ ಬಸ್ಸು ಎಲ್ಲಾ ರೀತಿಯ ಸಕಲ ಸೌಕರ್ಯಗಳನ್ನು ಹೊಂದಿದೆ.