

ಬೆಳಗಾವಿ: ಸಿದ್ದರಾಮಯ್ಯ ನಾಲಿಗೆಗೆ ಮತ್ತು ಮಿದುಳಿಗೆ ನಿಯಂತ್ರಣ ಇಲ್ಲವೆಂಬುದು ಈಗಾಗಲೇ ಅನೇಕ ಸಾರಿ ಸಾಬೀತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬೆಳಗಾವಿ ಲೋಕಸಭೆ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಪರವಾಗಿ ಪ್ರಚಾರ ಕಾರ್ಯ ನಡೆಸುವಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿವಂಗತ ಸಚಿವ ಸುರೇಶ್ ಅಂಗಡಿ ಅವರ ಧರ್ಮಪತ್ನಿ ಮಂಗಳಾ ಅವರ ಬಗ್ಗೆ ಸಿದ್ದರಾಮಯ್ಯ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ನಾಲಿಗೆಯಲ್ಲಿ ಏನು ಬರುತ್ತೆ ಇದು ಅರ್ಥವಾಗದಂತ ಮಾತು. ಸಿಎಂ ಆಗಿ, ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದರೂ ಇನ್ನೂ ಹಗುರ ಮಾತು ಬಿಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಿಂದ 25 ಬಿಜೆಪಿ ಸಂಸದರಿದ್ದರೂ ರಾಜ್ಯಕ್ಕಾಗಿ ಸಂಸತ್ ನಲ್ಲಿ ಧ್ವನಿ ಎತ್ತುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಧ್ವನಿ ಎತ್ತುವ ಅಗತ್ಯ ಇಲ್ಲ, ನಮ್ಮ ಕ್ಷೇತ್ರಕ್ಕೆ ರಾಜ್ಯಕ್ಕೆ ಏನು ಬೇಕೋ ಪ್ರಧಾನಿ ಅದನ್ನ ಕೊಡ್ತಿದ್ದಾರೆ. ವಿಪಕ್ಷದಲ್ಲಿದ್ದವರು ಧ್ವನಿ ಎತ್ತಬೇಕು, ಆಡಳಿತ ಪಕ್ಷದಲ್ಲಿದ್ದವರು ಕೆಲಸ ಮಾಡಬೇಕು ಇದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸುತ್ತೆ. ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡ್ತಿದ್ದಾರೆ. ನಾವು ಯಾವುದೇ ಅಬ್ಬರ ಮಾಡ್ತಿಲ್ಲ. ಮಂಗಲ ಅಂಗಡಿಯವರು ಬಹು ದೊಡ್ಡ ಅಂತರದಿಂದ ಜಯ ಸಾಧಿಸುತ್ತಾರೆ. ಬೇರೆ ಅಭ್ಯರ್ಥಿಗಳು ಇದ್ದಾರೆ ಅಂತಾ ನಮಗೆ ಅನಿಸುತ್ತಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.