ಪ್ರಧಾನಿ ಮೋದಿ ಬಾಂಧವ್ಯದ ಮೇಲೆ ದೇವೇಗೌಡರು ಮೇಕೆದಾಟು ಅಣೆಕಟ್ಟು ಮಾಡಿಸಲಿ: ಸಿದ್ದರಾಮಯ್ಯ ಸವಾಲು

hdd
Published on

ಮೈಸೂರು: ಅಭಿವೃದ್ಧಿ ಶೂನ್ಯ ಆಡಳಿತವೇ ಅವರ ಈ ವರೆಗಿನ ಬಿಜೆಪಿ ಸಾಧನೆ. ಅಭಿವೃದ್ಧಿ ಮಾಡಿದ್ದರೆ ಟ್ರೇಲರ್ ಆರಂಭ ಆಗುತ್ತಿತ್ತು, ಹಾಗಾಗಿ ಇನ್ನು ಬಾಕಿ ಉಳಿದಿರುವುದು ಸುಳ್ಳಿನ ಪಿಕ್ಚರ್ ಮಾತ್ರ ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ತಾವೇ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿ ಕೇವಲ 200 ಲೋಕಸಭಾ ಸೀಟುಗಳನ್ನು ಗೆಲ್ಲುವುದೂ ಕಷ್ಟ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ತಂತ್ರಗಾರಿಕೆ ಕಾರಣದಿಂದ 400 ಸೀಟು ಗೆಲ್ಲುವುದಾಗಿ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸುತ್ತೇವೆ ಎಂದು ಹೊರಟವರೇ ಜನರ ಎದುರು ಮೂರ್ಖರಾಗುತ್ತಾರೆ. ಈ ಬಾರಿ 400 ದಾಟುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದು ಸಾಧ್ಯವಾಗುವುದಿಲ್ಲ ಎಂದರು.

ಕರ್ನಾಟಕದಲ್ಲಿ 20 ಸ್ಥಾನ ಕಾಂಗ್ರೆಸ್​ ಗೆಲ್ಲುತ್ತದೆ: ಕಡಿಮೆ ಸ್ಥಾನ ಬರುತ್ತದೆ ಎಂದು ಗೊತ್ತಾದ ಮೇಲೆಯೇ ಹೆಚ್ಚು ಸ್ಥಾನ ಬರುತ್ತವೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ‌. ಇದು ಕೂಡ ಅವರ ತಂತ್ರಗಾರಿಕೆ. ಕರ್ನಾಟಕದಲ್ಲಿ ನನಗೆ ವಿಶ್ವಾಸ ಇದೆ. 18ರಿಂದ 20 ಸ್ಥಾನ ಗೆಲ್ಲುತ್ತೇವೆ‌ ಎಂದು ಸಿದ್ದರಾಮಯ್ಯ ಹೇಳಿದರು

ದೇವೇಗೌಡರಿಗೆ ತಿರುಗೇಟು: ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದು ಹೇಳಿದ್ದು ನಿಜ. ಮೋದಿ ಅವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದಿದ್ದರು. ಅವರ ಮಾತನ್ನೇ ನಾನು ಈಗ ನೆನಪು ಮಾಡಿದೆ. ಸತ್ಯ ಹೇಳಿದರೆ ಗರ್ವ ತೋರಿಸಿದಂತೆ ಆಗುತ್ತದಾ ಎಂದು ದೇವೇಗೌಡರಿಗೆ ತಿರುಗೇಟು ನೀಡಿದರು.

ಸುಳ್ಳು ಯಾಕೆ ಹೇಳುತ್ತಾರೆ: ತಮಗೆ ಮೋದಿ ಅವರೊಂದಿಗೆ ಅವಿನಾಭಾವ ಸಂಬಂಧವಿದೆ ಎಂದು ದೇವೇಗೌಡರು ಹೇಳಿದ್ದಾರೆ. ಹಾಗಾದರೆ ಅದೇ ಬಾಂಧವ್ಯದ ಮೇಲೆ ಮೇಕೆದಾಟು ಅಣೆಕಟ್ಟು ಮಾಡಿಸಲಿ. ಸುಳ್ಳು ಯಾಕೆ ಹೇಳುತ್ತಾರೆ. ಎನ್​ಡಿಎ ಬಂದರೆ ಮಾಡಿಸುತ್ತೇನೆ ಎನ್ನುವವರು ಈಗಲೇ ಮಾಡಿಸಲಿ ಎಂದು ಹೇಳಿದರು. ಜೆಡಿಎಸ್‌ನವರು ಮೈತ್ರಿ ಎಂದರೇನು ಎಂದು ಕಳೆದ ಬಾರಿಯೇ ತೋರಿಸಿದ್ದಾರೆ. ಮೈತ್ರಿಯಲ್ಲಿ ನಾಯಕರು ಜೊತೆಯಾಗುವುದು ಮುಖ್ಯವಲ್ಲ, ಜನರು ಒಂದಾಗಬೇಕು. ಜನರು ಯಾವ ಪಕ್ಷಕ್ಕೂ ಸೇರಿದವರಲ್ಲ, ಮೈತ್ರಿ ಮಾಡಿಕೊಂಡಿದ್ದಾರೆ ಎಂದು ನಾಯಕರ ಮಾತು ಕೇಳುವವರಲ್ಲ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net