19 ರಂದು ಸಿದ್ದಕಟ್ಟೆ ಕೊಡಂಗೆ ಕಂಬಳ : ಅವಿಲ್ ಮಿನೇಜಸ್ ಮಾಹಿತಿ ಹಗ್ಗ, ನೇಗಿಲು ಕಿರಿಯ ವಿಭಾಗಕ್ಕೆ ಅವಕಾಶ

sabhe
Published on

ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ ಅ.19ರಂದು ಶನಿವಾರ ರೋಟರಿ ಕಂಬಳ ನಡೆಸಲು ನಿರ್ಧರಿಸಲಾಗಿದೆ ಎಂದು ರೋಟರಿ ಹಿಲ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ, ಕಂಬಳ ಕೋಣಗಳ ಯಜಮಾನ ಅವಿಲ್ ಮಿನೇಜಸ್ ಹೇಳಿದರು.

ಸಿದ್ದಕಟ್ಟೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಮತ್ತು ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ವತಿಯಿಂದ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಸಿದ್ದಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ನಡೆಯುವ ಈ ಕಂಬಳ ಕೂಟದಲ್ಲಿ 100ಕ್ಕೂ ಮಿಕ್ಕಿ ಜೋಡಿ ಓಟದ ಕೋಣಗಳು ಭಾಗವಹಿಸಲಿದ್ದು, ಕೇವಲ ಹಗ್ಗ ಕಿರಿಯ ಮತ್ತು ನೇಗಿಲು ಕಿರಿಯ ವಿಭಾಗಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ಕ್ಲಬ್ ಅಧ್ಯಕ್ಷ ಸುರೇಶ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವಿಲ್ ಮಿನೇಜಸ್ ನೇತೃತ್ವದಲ್ಲಿ ನಡೆಯುವ ಈ ಕಂಬಳ ಕೂಟವು ಬೆಳಗ್ಗೆ 8.30ಕ್ಕೆ ಆರಂಭಗೊಂಡು ರಾತ್ರಿ ಗಂಟೆ 10.30ಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.

ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ವಾಮದಪದವು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ಮತ್ತಿತರರು ಸಲಹೆ ನೀಡಿದರು.

ಕ್ಲಬ್ ಉಪಾಧ್ಯಕ್ಷ ವಿಜಯ ಫರ್ನಾಂಡಿಸ್, ಸದಸ್ಯರಾದ ಕೆ.ರಮೇಶ ನಾಯಕ್ ರಾಯಿ, ಪ್ರಭಾಕರ ಪ್ರಭು ಕರ್ಪೆ, ಮೋಹನ್ ಕೆ.ಶ್ರೀಯಾನ್ ರಾಯಿ, ಸ್ಥಳದಾನಿ ಚಂದ್ರಶೇಖರ ಕೊಡಂಗೆ, ಜನಾರ್ದನ ಬಂಗೇರ ಮತ್ತಿತರರು ಇದ್ದರು. ಕ್ಲಬ್ ಕಾರ್ಯದರ್ಶಿ ರಾಜೇಶ ಶೆಟ್ಟಿ ಸೀತಾಳ ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net