

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಉಪ್ಪಳ ಅಟ್ಟೆಗೋಳಿಯಲ್ಲಿ ತಂಡವೊಂದು ಮೀನು ಸಾಗಾಟದ ಲಾರಿ ತಡೆದು ಚಾಲಕಗೆ ಚಾಕು ತೋರಿಸಿ 1.64 ಲಕ್ಷ ರೂ. ದರೋಡೆ ನಡೆಸಿದೆ. ಪೈವಳಿಕೆ ನಿವಾಸಿ ಯೂಸುಫ್ ದರೋಡೆಗೊಳಗಾದವರು. ಎಂದಿನಂತೆ ಬುಧವಾರ ನಸುಕಿಗೆ ಯೂಸುಫ್ ಲಾರಿಯಲ್ಲಿ ಮಂಗಳೂರಿಗೆ ಮೀನು ತರಲು ತೆರಳುವಾಗ ಅಟ್ಟೆಗೋಳಿಯಲ್ಲಿ ಇಬ್ಬರ ತಂಡ ಲಾರಿ ತಡೆದು ನಿಲ್ಲಿಸಿದೆ. ಲಾರಿಯನ್ನೇರಿದ ತಂಡ ಯೂಸುಫ್ ಅವರ ಕತ್ತಿಗೆ ಚಾಕು ಇರಿಸಿ ಹಣ ನೀಡುವಂತೆ ಬೆದರಿಕೆಯೊಡ್ಡಿದೆ. ಯೂಸುಫ್ ಅವರನ್ನು ಥಳಿಸಿ ಕತ್ತು ಸೀಳುವುದಾಗಿ ಬೆದರಿಕೆಯೊಡ್ಡಿದಾಗ ಮೀನು ಖರೀದಿಗಾಗಿ ತೆಗೆದಿರಿಸಿದ್ದ 1.64 ರೂ.ಮೊತ್ತವನ್ನು ನೀಡಬೇಕಾಯಿತು ದೂರಿನಲ್ಲಿ ತಿಳಿಸಿದಾರೆ. ಹಣ ಕೈಗೆ ಸಿಗುತ್ತಿದ್ದಂತೆ ತಂಡ ಬೈಕಲ್ಲಿ ಪರಾರಿಯಾಗಿದೆ. ಈ ಬಗ್ಗೆ ಯೂಸುಫ್ ಮಂಜೇಶ್ವರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಆಸುಪಾಸಿನ ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ಆರಂಭಿಸಿದ್ದಾರೆ.