

ಚಂಡಿಗಢ್: ಲಾಕ್ಡೌನ್ಅನ್ನು ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಂಜಾಬ್ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಜತೆಗೆ, ಈ ಅವಧಿಯನ್ನು ಮೇ 16ರವರೆಗೂ ವಿಸ್ತರಿಸಲಾಗಿದೆ. ಮನೆಯಿಂದ ಹೊರಬರಲು ಕೂಡ ಅಲ್ಲಿ ಪಾಸ್ ಪಡೆಯಲೇಬೇಕು. ಪೊಲೀಸರು ಕೂಡ ಇದನ್ನು ಅಷ್ಟೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದ್ದಾರೆ. ಇದರ ನಡುವೆಯೇ ಕಳೆದ ಏಪ್ರಿಲ್ 12ರ ಬೆಳಗ್ಗೆ ಅಲ್ಲೊಂದು ಅಮಾನವೀಯ ಘಟನೆ ನಡೆದುಹೋಯ್ತು.
ಪಟಿಯಾಲಾದ ತರಕಾರಿ ಮಾರುಕಟ್ಟೆಗೆ ಬೆಳ್ಳಂಬೆಳಗ್ಗೆ ಬಂದಿದ್ದ ನಿಹಾಂಗ್ಗಳಿಗೆ ಪಾಸ್ ಎಲ್ಲಿ ಎಂದು ಕರ್ತವ್ಯನಿರತ ಎಎಸ್ಐ ಹರ್ಜಿತ್ ಸಿಂಗ್ ಕೇಳಿದ್ದರು. ಇದರಿಂದ ಕೆರಳಿದ ಗುಂಪು ಅವರ ಎಡಗೈಯನ್ನೇ ಕತ್ತರಿಸಿತ್ತು. ಬಳಿಕ ಗುರುದ್ವಾರದಲ್ಲಿ ಅಡಗಿದ್ದವರನ್ನು ಭಾರಿ ಪೊಲೀಸ್ ಬಂದೋಬಸ್ತ್ ಬಳಸಿ ಬಂಧಿಸಲಾಗಿತ್ತು.
ಈ ನಡುವೆ, ಎಸ್ಐ ಹರ್ಜಿತ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಂಡಿಗಢ್ನ ಸ್ನಾತಕೋತ್ತರ ವೈದ್ಯಕೀಯ ಸಂಸ್ಥೆಗೆ ಸೇರಿಸಲಾಗಿತ್ತು. ತುಂಡಾಗಿದ್ದ ಕೈಯನ್ನು ಸತತ ಏಳು ತಾಸುಗಳವರೆಗೆ ಶಸ್ತ್ರಚಿಕಿತ್ಸೆ ನಡೆಸಿ ಮರುಜೋಡಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಎಎಸ್ಐ ಕರ್ತವ್ಯ ನಿಷ್ಠೆ ಶ್ಲಾಘಿಸಿದ್ದ ಇಲಾಖೆ ಹರ್ಜಿತ್ ಸಿಂಗ್ ಅವರನ್ನು ಎಸ್ಐ ಹುದ್ದೆಗೆ ಬಡ್ತಿಗೊಳಿಸಿತ್ತು.
ಸತತ 18 ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಹರ್ಜಿತ್ ಸಿಂಗ್ ಗುರುವಾರ ಆಸ್ಪತ್ರೆಯಿಂದ ಗುರುವಾರ ಡಿಸ್ಚಾರ್ಜ್ ಆಗಿದ್ದಾರೆ. ಪಟಿಯಾಲಾದಲ್ಲಿ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೆಂಪುಹಾಸಿನ ಮೇಲೆ ಬರಮಾಡಿಕೊಂಡು ಅವರಿಗೆ ವೀರೋಚಿತ ಸ್ವಾಗತ ನೀಡಿದೆ. ಅಲ್ಲದೇ. ಇದರ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದೆ.
ಇನ್ನೊಂದು ವಿಶೇಷವೆಂದರೆ, ಹರ್ಜಿತ್ ಸಿಂಗ್ ಪುತ್ರ ಅರ್ಷ್ಪ್ರೀತ್ ಸಿಂಗ್ಗೆ ಕಾನ್ಸ್ಟೆಬಲ್ ಹುದ್ದೆ ನೀಡಲಾಗಿದೆ. ಡಿಜಿಪಿ ದಿನಕರ್ ಗುಪ್ತಾ ಖುದ್ದಾಗಿ ನೇಮಕಾತಿ ಪತ್ರವನ್ನು ಆಸ್ಪತ್ರೆಯಲ್ಲೇ ಹರ್ಜಿತ್ ಸಿಂಗ್ಗೆ ಹಸ್ತಾಂತರಿಸಿದ್ದಾರೆ. ಇದನ್ನು ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಶೇಷ ಗೌರವ: ಹರ್ಜಿತ್ ಸಿಂಗ್ ನೇಮ್ಪ್ಲೇಟ್ಅನ್ನು ತಮ್ಮ ಎದೆಯ ಮೇಲೆ ಧರಿಸುವ ಮೂಲಕ ಪಂಜಾಬ್ ಪೊಲೀಸರು ವಿಶೇಷ ಗೌರವ ಸಲ್ಲಿಸಿದ್ದರು.