ಹಣಕ್ಕಾಗಿ ಅಶ್ಲೀಲ ದೃಶ್ಯಗಳಲ್ಲಿ ನಟಿಸಿದ ಆರೋಪ: ನಟಿ ಶ್ವೇತಾ ಕಣ್ಣೀರು, ಮಹಾ ಸಂಚು ಬಯಲು! Shwetha Menon

Shwetha Menon
Published on

Shwetha Menon : ಅಶ್ಲೀಲ ದೃಶ್ಯಗಳಲ್ಲಿ ನಟಿಸಿ ಹಣ ಗಳಿಸಿದ್ದಾರೆ ಎಂಬ ಆರೋಪ ನಟಿ ಶ್ವೇತಾ ಮೆನನ್ ವಿರುದ್ಧ ಕೇಳಿಬಂದಿದೆ. ಈ ಸಂಗತಿ ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಲ್ಲದೆ, ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಸಹ ಏರಿದೆ. ಇದರ ಬೆನ್ನಲ್ಲೇ ಖ್ಯಾತ ಮಲಯಾಳಂ ನಿರ್ದೇಶಕ ಮೇಜರ್ ರವಿ, ಶ್ವೇತಾ ಪರ ಬ್ಯಾಟ್​ ಬೀಸಿದ್ದಾರೆ.

ಮಲಯಾಳಂ ಚಲನಚಿತ್ರ ಕಲಾವಿದರ ಸಂಘದ ನಟಿಯ ಸಂಘಟನೆಯ ಅಧ್ಯಕ್ಷೆ ಸ್ಥಾನಕ್ಕೆ ಶ್ವೇತಾ ಮೆನನ್​ ಸ್ಪರ್ಧಿಸುತ್ತಿರುವುದರಿಂದ ಅವರ ವಿರುದ್ಧ ಇಂತಹ ಆರೋಪಗಳನ್ನು ಮಾಡಲಾಗಿದೆ ಎಂದು ಮೇಜರ್ ರವಿ ಹೇಳಿದ್ದಾರೆ. ನಾನು ಶ್ವೇತಾ ಅವರೊಂದಿಗೆ ಮಾತನಾಡಿದೆ ಮತ್ತು ಅವರು ಫೋನ್‌ನಲ್ಲಿ ಕಣ್ಣೀರು ಹಾಕಿದರು ಎಂದು ತಮ್ಮ ಫೇಸ್​ಬುಕ್​ ಮೂಲಕ ರವಿ ಬಹಿರಂಗಪಡಿಸಿದ್ದಾರೆ.

ಈ ಪ್ರಕರಣದ ಬಗ್ಗೆ ನನಗೆ ತಿಳಿದಾಗ, ತಕ್ಷಣ ನಾನು ಶ್ವೇತಾಗೆ ಕರೆ ಮಾಡಿದೆ. ಏನಿದು ಎಂದು ತಮಾಷೆಯಾಗಿ ಕೇಳಿದೆ. ಆದರೆ, ಆ ವೇಳೆ ಶ್ವೇತಾ ಅಳುತ್ತಿದ್ದಳು. ನನಗೆ 13 ವರ್ಷದ ಮಗಳಿದ್ದಾಳೆ. ಇಂತಹ ಆರೋಪ ಮಾಡಿದವರಿಗೆ ನನ್ನ ನೆನಪಿದೆಯೇ ಎಂದು ಶ್ವೇತಾ ನನ್ನನ್ನು ಕೇಳಿದಳು. ಆ ಅಳು ಕೇಳಿದಾಗಲೇ ನನಗೆ ವಿಷಯದ ಗಂಭೀರತೆ ಅರ್ಥವಾಯಿತು. ಇದು ಯಾರೋ ಒಬ್ಬ ಗೂಂಡಾ ಮಾಡಿದ ಕೆಲಸ. ಸೆನ್ಸಾರ್ ಮಂಡಳಿಯಿಂದ ಅನುಮತಿ ಪಡೆದ ಚಿತ್ರಗಳಲ್ಲಿ ಶ್ವೇತಾ ನಟಿಸಿದ್ದಾರೆ ಮತ್ತು ಹತ್ತು ವರ್ಷಗಳ ಹಿಂದೆ ನಟಿಸಿದ ಚಿತ್ರದ ಹೆಸರಿನಲ್ಲಿ ಈಗ ದೂರು ದಾಖಲಾಗಿದೆ. ಇದು ವೈಯಕ್ತಿಕ ದ್ವೇಷದಿಂದಾಗಿ ಎಂಬುದು ಸ್ಪಷ್ಟವಾಗಿದೆ ಎಂದು ಮೇಜರ್ ರವಿ ಹೇಳಿದರು.

ಇದಕ್ಕೂ ಮುನ್ನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನಟಿ ಶ್ವೇತಾ ಮೆನನ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಕುರಿತು ಕ್ರಮ ಕೈಗೊಳ್ಳಲಾಗಿದೆ. ಎರ್ನಾಕುಲಂ ಸಿಜೆಎಂ ನ್ಯಾಯಾಲಯದ ಮಧ್ಯಂತರ ಆದೇಶವು ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಹೇಳಿ ಹೈಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಿತು. ಎಫ್‌ಐಆರ್‌ಗೂ ಸಹ ತಡೆ ನೀಡಿದೆ. ಪೊಲೀಸರು ಮತ್ತು ದೂರುದಾರರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಿಜೆಎಂ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್‌ನಿಂದ ವರದಿಯನ್ನು ಸಹ ಕೋರಲಾಗಿದೆ.

ಎರ್ನಾಕುಲಂ ಸಿಜೆಎಂ ನ್ಯಾಯಾಲಯದ ನಿರ್ದೇಶನದ ಮೇರೆಗೆ ಸಾಮಾಜಿಕ ಕಾರ್ಯಕರ್ತ ಮಾರ್ಟಿನ್ ಮೆಣಚೇರಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಕೇಂದ್ರ ಪೊಲೀಸರು ಈ ಹಿಂದೆ ಶ್ವೇತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಶ್ವೇತಾ ಮೆನನ್ ಈ ಹಿಂದೆ ನಟಿಸಿದ್ದ ಎಲ್ಲಾ ಚಿತ್ರಗಳಲ್ಲಿ ಅಶ್ಲೀಲ ದೃಶ್ಯಗಳಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಈ ಹಿಂದೆ ನಟಿಸಿದ್ದ ಗರ್ಭನಿರೋಧಕ ಕಾಂಡೋಮ್‌ನ ಜಾಹೀರಾತು ಕೂಡ ದೂರಿನ ಪಟ್ಟಿಯಲ್ಲಿದೆ. ಆದರೆ, ಹೈಕೊರ್ಟ್​ ಎಫ್​ಐಆರ್​ಗೆ ತಡೆ ನೀಡಿದ್ದು, ಶ್ವೇತಾಗೆ ಬಿಗ್​ ರಿಲೀಫ್​ ಸಿಕ್ಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net