

ಕಾಸರಗೋಡು: ಭಗವಾನ್ ಶ್ರೀಕೃಷ್ಣನ ಸಂದೇಶ ಜಗತ್ತಿಗೆ ಪ್ರೇರಣಾದಾಯಕವಾಗಿದೆ ಎಂದು ಲೇಖಕಿ ಅಕ್ಷತಾರಾಜ್ ಪೆರ್ಲ ಹೇಳಿದರು.
ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಹಾಗೂ ಮಹೇಶ್ವರೀ ಮಹಿಳಾ ಸಮಾಜ ವತಿಯಿಂದ ಬಜಕೂಡ್ಲು ದೇವಸ್ಥಾನ ವಠಾರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಕ್ಲಬ್ ಅಧ್ಯಕ್ಷ ವಕೀಲ ಸಂತೋಷ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್, ಧಾರ್ಮಿಕ ಮುಂದಾಳು ಉದಯ ಚೆಟ್ಟಿಯಾರ್ ಬಜಕೂಡ್ಲು, ಮಹೇಶ್ವರೀ ಮಹಿಳಾ ಸಮಾಜದ ಉಪಾಧ್ಯಕ್ಷೆ ನಿರ್ಮಲಾ ಬಿ.ಎನ್. ಉಪಸ್ಥಿತರಿದ್ದರು.
ಬೆಳಗ್ಗೆ ದೇವಸ್ಥಾನದ ಮುಖ್ಯ ಅರ್ಚಕ ಚಂದ್ರಶೇಖರ ನಾವಡ ಉತ್ಸವಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸ್ಪರ್ಧೆ, ಐದು ವರ್ಷದೊಳಗಿನ ಮಕ್ಕಳಿಗಾಗಿ ಶ್ರೀಕೃಷ್ಣ ವೇಷ ಸ್ಪರ್ಧೆ ನಡೆಯಿತು.
ಅಮಿತಾ ಬಜಕೂಡ್ಲು ಸ್ವಾಗತಿಸಿ, ಸಾಧಕರ ಪರಿಚಯ ನೀಡಿದರು. ಸುಜಿತ್ ರೈ ಬಜಕೂಡ್ಲು ಸ್ಪರ್ಧಾ ವಿಜೇತರ ಪಟ್ಟಿ ಪ್ರಕಟಿಸಿದರು. ಪುರುಷೋತ್ತಮ ಬಿ.ಎಂ ಕಾರ್ಯಕ್ರಮ ನಿರೂಪಿಸಿದರು. ಪದ್ಮನಾಭ ಸುವರ್ಣ ವಂದಿಸಿದರು.