

ಪುತ್ತೂರು: ವಿವೇಕಾನಂದ ಶಿಶುಮಂದಿರ, ಸಾರ್ವಜನಿಕ ಶ್ರೀಕೃಷ್ಣ ಲೋಕ ಸಮಿತಿ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಹಯೋಗದೊಂದಿಗೆ ನಡೆದ ೨೬ನೇ ವರ್ಷದ ಶ್ರೀಕೃಷ್ಣ ಲೋಕಕ್ಕೆ ಪರ್ಲಡ್ಕ ಶಿವಪೇಟೆಯ ಶಿಶು ಮಂದಿರದ ಆವರಣದಲ್ಲಿ ಬೆಳಗ್ಗೆ ಬಾಲಕೃಷ್ಣನನ್ನು ತೊಟ್ಟಿನಲ್ಲಿ ಹಾಕಿ, ಬೆಣ್ಣೆ ತಿನ್ನಿಸಿ, ಮಾತೆಯರು ಜೋಗುಳ ಹಾಡುವ ಮೂಲಕ ಚಾಲನೆ ನೀಡಲಾಯಿತು.
ಶೋಭಾಯಾತ್ರೆಗೆ ಮಾಜಿ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು. ನಗರಸಭಾ ಸದಸ್ಯೆ ವಿದ್ಯಾಗೌರಿ ಧ್ವಜ ಹಸ್ತಾಂತರಿಸಿದರು. ಶಿಶು ಮಂದಿರದ ಆವರಣದಿಂದ ಹೊರಟ ಮೆರವಣಿಗೆಯು ಎಂ.ಟಿ. ರಸ್ತೆಯಾಗಿ ಮುಖ್ಯ ರಸ್ತೆಯ ಮೂಲಕ ಸಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಂಡಿತು.
ಕೃಷ್ಣ-ರಾಧೆಯ ವೇಷ ಧರಿಸಿದ ಸಾವಿರಾರು ಪುಟಾಣಿಗಳ ವೈಭವದ ಮೆರವಣಿಗೆಯಲ್ಲಿ ಮಕ್ಕಳ ಪೋಷಕರು ಜತೆಯಾಗಿ ಸಾಗಿದರು. ಶ್ರೀಕೃಷ್ಣ ಹಾಗೂ ರಾಧೆಯ ವೇಷಭೂಷಣದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ಮಗುವಿನಲ್ಲಿಯೂ ಕೃಷ್ಣನನ್ನು ಕಂಡು ಪೋಷಕರು ಸಂಭ್ರಮಿಸಿದರು.