ಸುಳ್ಯ: ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು, ಶ್ರೀ ಶಾರದಾಂಬಾ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ 53ನೇ ವರ್ಷದ ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ ಕಾರ್ಯಕ್ರಮದ ಏಳನೇ ದಿನ ಶ್ರೀ ಮಹಾಗಣಪತಿ ಹವನ ಸಹಿತ ಶ್ರೀ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಮತ್ತು ವಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು.
ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಸಹಕಾರದೊಂದಿಗೆ ಶ್ರೀ ಮಹಾಗಣಪತಿ ಹವನ ಸಹಿತ ಚಂಡಿಕಾ ಮಹಾಯಾಗ ಮತ್ತು ಅಷ್ಟಾವಧಾನ ಸೇವೆ ಜರಗಿತು. ಶ್ರೀ ಚಂಡಿಕಾ ಮಹಾಹವನದಲ್ಲಿ ದೇವಿ ಮಹಾತ್ಮೆಯ ಏಳ್ನೂರು ಶ್ಲೋಕಗಳಿಂದ ಅನ್ನಪಾಯಸ ದ್ರವ್ಯದ ಆಹುತಿ ವಾಡಲಾಯಿತು.
ಶ್ರೀದೇವಿಯ ಮುಂಭಾಗದಲ್ಲಿ ಮಂಡಲಾರಾಧನೆ ವಾಡಿ ಶ್ರೀ ಶಾರದಾಂಬಾ ಕಲಾವೇದಿಕೆಯಲ್ಲಿ ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿ ಅಂತರ್ಗತ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಕಲ್ಪೋಕ್ತ ಪೂಜೆ ನಡೆಯಿತು. ರಾತ್ರಿ ಶ್ರೀದೇವಿಗೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು.