

‘ಪಡ್ಡೆಹುಲಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ ಶ್ರೇಯಸ್ ಕೆ. ಮಂಜು, ಆ ಬಳಿಕ ‘ವಿಷ್ಣುಪ್ರಿಯ’ ಚಿತ್ರದಲ್ಲಿ ನಟಿಸಿದ್ದರು. ಈಗ ಅವರು ನಾಯಕನಾಗಿರುವ ಮೂರನೇ ಸಿನಿಮಾ ‘ರಾಣ’. ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ರಾಣ’ ಚಿತ್ರದಲ್ಲಿ ಶ್ರೇಯಸ್ಗೆ ‘ಏಕ್ಲವ್ಯಾ’ ನಟಿ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. ಜತೆಗೆ ಸಂಯುಕ್ತಾ ಹೆಗ್ಡೆ ಸ್ಪೆಷಲ್ ಸಾಂಗ್ನಲ್ಲಿ ಮಿಂಚಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಾಯಕ ಶ್ರೇಯಸ್, ‘ಇದೊಂದು ಪಕ್ಕಾ ಆಕ್ಷನ್ ಕಮರ್ಷಿಯಲ್ ಸಿನಿಮಾ. ಐದು ಫೈಟ್ಗಳಿವೆ. ಎಲ್ಲವು ಕಥೆಗೆ ಅನುಗುಣವಾಗಿವೆ ಹಾಗೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಚಿತ್ರೀಕರಣಕ್ಕು
ಮುನ್ನ ಡಾನ್ಸ್ ತರಬೇತಿ ಪಡೆಯುವಂತೆಯೇ, ಫೈಟ್ಸ್ಗೂ ತರಬೇತಿ ಪಡೆದು ನಂತರ ಶೂಟಿಂಗ್ಗೆ ಹೋಗುತ್ತಿದ್ದೆವು’ ಎಂದು ಹೇಳಿಕೊಳ್ಳುತ್ತಾರೆ. ತಮ್ಮ ಪಾತ್ರಕ್ಕಾಗಿ ಸಾಕಷ್ಟು ದೇಹ ದಂಡಿಸಿರುವ ಶ್ರೇಯಸ್ ಐದು ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರಂತೆ. ಎರಡು ಫೈಟ್ಗಳಲ್ಲಿ ಲಾಂಗ್ ಹಿಡಿದು ಹೊಡೆದಾಡಿದರೆ, ಒಂದು ಮಾಸ್ ಫೈಟ್ ಜತೆಗೆ ಮತ್ತೊಂದು ಎಮೋಷನಲ್ ಫೈಟ್ ಕೂಡ ಇದೆಯಂತೆ. ಹೀಗಾಗಿಯೇ ಚಿತ್ರದ ಪ್ರಮುಖ ಆಕರ್ಷಣೆ ಆಕ್ಷನ್ ಅಂತಾರೆ ಶ್ರೇಯಸ್.
ಚೇತನ್ ಡಿಸೋಜಾ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಫೈಟ್ಗಳು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವ ಭರವಸೆ ಅವರದು. ಇನ್ನು ಹೊಡೆದಾಟದ ಚಿತ್ರೀಕರಣದಲ್ಲಿ ಪೆಟ್ಟು ಬೀಳದಿದ್ದರೆ ಹೇಗೆ? ‘ಜಂಪ್ ಮಾಡಿ ಕಿಕ್ ಮಾಡುವ ಸನ್ನಿವೇಶದ ಚಿತ್ರೀಕರಣದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದೆ. ಮತ್ತೊಮ್ಮೆ ಹಗ್ಗಗಳನ್ನು ಕಟ್ಟಿಕೊಂಡು ಫೈಟ್ ಮಾಡುತ್ತಿದ್ದ ಕಾರಣ ಹಗ್ಗ ಉಜ್ಜಿ ಗಾಯವಾಗಿ, ಮೈಯೆಲ್ಲ ಉರಿಯುತ್ತಿತ್ತು’ ಎನ್ನುವ ಶ್ರೇಯಸ್, ‘ಅಷ್ಟೆಲ್ಲ ಕಷ್ಟಪಟ್ಟಿದ್ದಕ್ಕೂ ಸಿನಿಮಾ ಉತ್ತಮ ರೀತಿಯಲ್ಲಿ ಮೂಡಿಬಂದಿರುವ ಸಮಾಧಾನವಿದೆ ಎನ್ನುತ್ತಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದು, ಕೆಎಂ ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾನಿರ್ದೇಶನವಿದೆ. ‘ರಾಣ’ ಇಂದು ರಾಜ್ಯಾದ್ಯತ ಬಿಡುಗಡೆಯಾಗಲಿದೆ.