

Shreyas Iyer: ನಿನ್ನೆ (ಜೂ.01) ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕ್ವಾಲಿಫೈಯರ್-2 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಪಡೆ ಭರ್ಜರಿ ಗೆಲುವು ದಾಖಲಿಸಿ, ಇದೀಗ ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಫೈನಲ್ನಲ್ಲಿ ಆರ್ಸಿಬಿಯನ್ನು ಎದುರಿಸುವ ಪಂಜಾಬ್ ಕಿಂಗ್ಸ್, 18ನೇ ಆವೃತ್ತಿಯ ಟ್ರೋಫಿಗಾಗಿ ಬಿರುಸಿನ ಪೈಪೋಟಿಗೆ ಎದುರುನೋಡುತ್ತಿದೆ. ಕ್ವಾಲಿಫೈಯರ್-2 ಪಂದ್ಯದಲ್ಲಿ ಗೆಲುವಿನ ಪತಾಕೆ ಹಾರಿಸಿದ ಶ್ರೇಯಸ್ಗೆ ಕಮೆಂಟೇಟರ್ವೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ದಿಗ್ಗಜ ಕ್ರಿಕೆಟಿಗರಿಗೆ ಕೊಟ್ಟ ಪಟ್ಟವನ್ನು ನೀಡಿರುವುದು ಮಾಜಿ ಕ್ರಿಕೆಟಿಗರ ಅಚ್ಚರಿಗೂ ಕಾರಣವಾಗಿದೆ.
ಮುಂಬೈ ಇಂಡಿಯನ್ಸ್ ಕೊಟ್ಟ 204 ರನ್ಗಳ ಸವಾಲಿನ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ಗೆ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ( ಅಜೇಯ 87 ರನ್, 41 ಎಸೆತ, 5 ಬೌಂಡರಿ, 8 ಸಿಕ್ಸರ್) ಮತ್ತು ನೆಹಾಲ್ ವಾಧೇರಾ (48 ರನ್, 29 ಎಸೆತ, 4 ಬೌಂಡರಿ, 2 ಸಿಕ್ಸರ್) ಅವರ ಸ್ಫೋಟಕ ಇನ್ನಿಂಗ್ಸ್ ಭರ್ಜರಿ ಗೆಲುವಿಗೆ ದಾರಿ ಮಾಡಿಕೊಟ್ಟಿತು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೇಯಸ್ರನ್ನು ಕೊಂಡಾಡಿದ ಜನಪ್ರಿಯ ಕಮೆಂಟೇಟರ್ ಜತಿನ್ ಸಪ್ರು, ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿಗೆ ಅಯ್ಯರ್ರನ್ನು ಹೋಲಿಸಿ ಮಾತನಾಡಿದ್ದಾರೆ.
"ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ನೋಡಿದ ಮೇಲೆ ನಮಗೆ ಹೊಸ 'ಕ್ಯಾಪ್ಟನ್ ಕೂಲ್' ಮತ್ತು 'ಚೇಸ್ ಮಾಸ್ಟರ್' ಸಿಕ್ಕಿದ್ದಾರೆ. ಅಯ್ಯರ್ ಆಡಿದ ಅದ್ಭುತ ಇನ್ನಿಂಗ್ಸ್ ಮರೆಯಲು ಸಾಧ್ಯವಿಲ್ಲ. ಕ್ಯಾಪ್ಟನ್ ಆಗಿ ಶ್ರೇಯಸ್ ತಮ್ಮ ಮೂರನೇ ಐಪಿಎಲ್ ಫೈನಲ್ ಆಡಲಿದ್ದಾರೆ. ಕ್ಯಾಪ್ಟನ್ ಕೂಲ್ ಮತ್ತು ಚೇಸ್ ಮಾಸ್ಟರ್ ಟೈಟಲ್ಗಳು ಧೋನಿ ಮತ್ತು ವಿರಾಟ್ಗೆ ಸಲ್ಲುತ್ತವೆ. ಆದ್ರೆ, ಇಂದಿನ ಪಂದ್ಯದಲ್ಲಿ ಆ ಕೆಲಸ ಅಯ್ಯರ್ ಮಾಡಿದ್ದಾರೆ. ಈಗ ಅವರೇ ಹೊಸ ಕ್ಯಾಪ್ಟನ್ ಕೂಲ್, ಚೇಸ್ ಮಾಸ್ಟರ್" ಎಂದು ಕ್ರಿಕೆಟ್ ಚರ್ಚೆಯಲ್ಲಿ ಹರ್ಭಜನ್ ಸಿಂಗ್ ಹಾಗೂ ಆಕಾಶ್ ಚೋಪ್ರಾ ಮುಂದೆಯೇ ಹೇಳಿದ್ದಾರೆ,(ಏಜೆನ್ಸೀಸ್).