'ಈ ಸಲ ಕಪ್​ ನಮ್ದೇ'! ಕೊಹ್ಲಿ ಟ್ರೋಫಿ​ ಹಿಡಿದ ಫೋಟೋಗೆ ದೇವಸ್ಥಾನದಲ್ಲಿ ಪೂಜೆ, ಹೆಚ್ಚಾಯ್ತು RCB ಫ್ಯಾನ್ಸ್​ ಕ್ರೇಜ್​

ವಿಜಯವಾಣಿ (1)
Published on

RCB: ಐಪಿಎಲ್​ 18ನೇ ಆವೃತ್ತಿಯ ಕೊನೆ ಹಂತಕ್ಕೆ ಇದೀಗ ಕ್ಷಣಗಣನೆ ಶುರುವಾಗಿದ್ದು, ಫೈನಲ್​ ಸಮರದಲ್ಲಿ ಆರ್​ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಮತ್ತೆ ಮುಖಾಮುಖಿಯಾಗಲಿವೆ. 9 ವರ್ಷಗಳ ಬಳಿಕ ಐಪಿಎಲ್​ ಫೈನಲ್​ಗೆ ಎಂಟ್ರಿ ಕೊಟ್ಟಿರುವ ಕೊಹ್ಲಿ ಪಡೆ, ಲೀಗ್​ನ ಆರಂಭದಿಂದಲೂ ಅತ್ಯುತ್ತಮ ಆಲ್​ರೌಂಡ್ ಪ್ರದರ್ಶನದ ಮೂಲಕ ಅಂತಿಮ ಘಟ್ಟ ತಲುಪಿರುವುದು ಸದ್ಯ ಅಪಾರ ಸಂಖ್ಯೆಯ ಕ್ರಿಕೆಟ್​ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಜೂ.3ರ ಫೈನಲ್​ ಬೆನ್ನಲ್ಲೇ ಆರ್​ಸಿಬಿ ಫ್ಯಾನ್ಸ್​ಗಳ ಕ್ರೇಜ್ ಹೆಚ್ಚಿದೆ. ಈಗಾಗಲೇ ಕೆಲ ಅಭಿಮಾನಿಗಳು ದೇವರ ಮೊರೆ ಹೋಗಿ, ತಂಡದ ಗೆಲುವಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ​

ದಾಖಲೆಗಳ ಸರದಾರ, 'ರನ್​ ಮೆಷಿನ್'​, 'ಕಿಂಗ್​ ಕೊಹ್ಲಿ'ಗೆ ವಿಶ್ವದಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಸಾಮಾನ್ಯ ಜನರಿಂದಿಡಿದು ಸೆಲೆಬ್ರಿಟಿಗಳವರೆಗೆ ಕೊಹ್ಲಿಯನ್ನು ಆರಾಧಿಸುವವರಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಈವರೆಗೆ ಯಾವುದೇ ಐಪಿಎಲ್​ ಫ್ರಾಂಚೈಸಿ ಬದಲಾಯಿಸದೇ ಒಂದೇ ತಂಡದಲ್ಲಿ ಆಡುತ್ತಿರುವ ಏಕೈಕ ಆಟಗಾರ ಅಂದರೆ ಅದು ಕೊಹ್ಲಿ. ಅಭಿಮಾನಿಗಳ ಬಳಗಕ್ಕೆ ಇದೊಂದು ವಿಶೇಷ ಸಂಗತಿಯಾಗಿದ್ದು, ತಮ್ಮ 18ನೇ ಆವೃತ್ತಿಯಲ್ಲಿ, 18ನೇ ವರ್ಷದಂದು ಜೆರ್ಸಿ ನಂ.18 ಈ ಬಾರಿ ಕಪ್ ಎತ್ತಿಹಿಡಿಯಬೇಕು ಎಂಬ ಕೂಗು ವ್ಯಾಪಕವಾಗಿದೆ.

ಆರ್​ಸಿಬಿ ಗೆಲುವಿಗಾಗಿ ಇದೀಗ ದೇವರ ಮೊರೆ ಹೋಗಿರುವ ಅಭಿಮಾನಿಗಳು, ದೇವಸ್ಥಾನಗಳಲ್ಲಿ ಫ್ರಾಂಚೈಸಿ ಹೆಸರು ಮತ್ತು ವಿರಾಟ್​ ಕೊಹ್ಲಿ ಅವರ ಫೋಟೊವಿಟ್ಟು ಪೂಜೆ ಮಾಡಿಸಿದ್ದಾರೆ. ಇನ್ನು ಆರ್​ಸಿಬಿ ಅಪ್ಪಟ್ಟ ಅಭಿಮಾನಿಯೊಬ್ಬರು, ಕಲಬುರ್ಗಿಯ ದೇವಸ್ಥಾನದಲ್ಲಿ ಟ್ರೋಫಿ ಎತ್ತಿಹಿಡಿದಿರುವ ವಿರಾಟ್​ ಫೋಟೋವನ್ನು ದೇವರ ಮುಂದಿಟ್ಟು ಪೂಜೆ ಮಾಡಿಸಿದ್ದಾರೆ. ಈ ಬಾರಿಯಾದರೂ ಆರ್​ಸಿಬಿ ಕಪ್​ ಗೆದ್ದು ಬರಲಿ ಎಂದು ಆಶಿಸಿದ್ದಾರೆ.

ಆರ್​ಸಿಬಿ ಗೆದ್ದರೆ ಏನ್ನೆಲ್ಲ ಉಚಿತ...?

ರಾಜ್ಯದಲ್ಲಿ ಆರ್​ಸಿಬಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿರುವ ಅಭಿಮಾನಿ ಬಳಗ ಒಂದೆಡೆಯಾದರೆ, ಚಾಟ್ಸ್​ ಮತ್ತು ಸಿಹಿ ತಿಂಡಿಗಳ ವ್ಯಾಪಾರಿಗಳು, ಆರ್​ಸಿಬಿ ಟ್ರೋಫಿ ಗೆದ್ದಲ್ಲಿ ಖಂಡಿತ ಉಚಿತ ಹಂಚಿಕೆಯ ಪೋಸ್ಟ್​ಗಳನ್ನು ಹಾಕಿಕೊಂಡಿರುವುದು ಮತ್ತೊಂದೆಡೆ. ತಮ್ಮ ಗ್ರಾಹಕರನ್ನು ಸೆಳೆಯುವುದರ ಜೊತೆಗೆ ಅಭಿಮಾನವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಒಂದಷ್ಟು ಫ್ಯಾನ್ಸ್ ಈ ನಿರ್ಧಾರ ಕೈಗೊಂಡಿರುವುದು ವಿಶೇಷ ಹಾಗೂ ವಿಭಿನ್ನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net