

Shreyas Iyer : ಐಪಿಎಲ್ 2025ರ ಮೆಗಾ ಹರಾಜಿಗೂ ಮುನ್ನ ಆಟಗಾರರ ರಿಟೇನ್ ಮತ್ತು ರಿಲೀಸ್ ಪಟ್ಟಿಯನ್ನು ಅ.31ರಂದು ಬಿಡುಗಡೆ ಮಾಡಲಾಗಿದೆ. ಎಲ್ಲ 10 ಫ್ರಾಂಚೈಸಿಗಳು ಐಪಿಎಲ್ 2025 ಗಾಗಿ ಉಳಿಸಿಕೊಳ್ಳಲು ಬಯಸುವ ಆಟಗಾರರ ಹೆಸರುಗಳನ್ನು ಪ್ರಕಟಿಸಿವೆ. ಅದೇ ಸಮಯದಲ್ಲಿ, ಅನೇಕ ಸ್ಟಾರ್ ಆಟಗಾರರು ತಂಡಗಳನ್ನು ತೊರೆದಿದ್ದು, ಮುಂದಿನ ತಿಂಗಳು ನಡೆಯುವ ಮೆಗಾ ಹರಾಜನ್ನು ಪ್ರವೇಶ ಮಾಡಲಿದ್ದಾರೆ.
ಅಚ್ಚರಿಯ ಸಂಗತಿ ಏನೆಂದರೆ ಕಳೆದ ಬಾರಿ ಐಪಿಎಲ್ ಟ್ರೋಫಿ ಗೆದ್ದ ಬಾಲಿವುಡ್ ನಟ ಶಾರುಖ್ ಖಾನ್ ಸಹ ಮಾಲೀಕತ್ವದ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಅವರನ್ನೇ ಕೈಬಿಡುವ ಮೂಲಕ ಫ್ರಾಂಚೈಸಿ ಅಚ್ಚರಿ ಮೂಡಿಸಿದೆ. ರಿಟೇನ್ ಪಟ್ಟಿಯಲ್ಲಿ ಅಯ್ಯರ್ ಹೆಸರು ಇಲ್ಲದಿರುವುದು ಸಾಕಷ್ಟು ಚರ್ಚಗೆ ದಾರಿ ಮಾಡಿಕೊಟ್ಟಿದೆ. ಅಷ್ಟಕ್ಕೂ ಅಯ್ಯರ್ ಅವರನ್ನು ತಂಡದಿಂದ ಹೊರಗಾಕಲು ಕಾರಣ ಏನೆಂಬುದನ್ನು ಕಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಸಿಇಒ ವೆಂಕಿ ಮೈಸೂರು ಬಹಿರಂಗಪಡಿಸಿದ್ದಾರೆ.
ಖಾಸಗಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವೆಂಕಿ ಮೈಸೂರು (Venky Mysore), ನಮ್ಮ ರಿಟೇನ್ ಪಟ್ಟಿಯ ಮೊದಲ ಆಯ್ಕೆಯಾಗಿ ಶ್ರೇಯಸ್ ಅಯ್ಯರ್ ಹೆಸರಿತ್ತು. ಅವರು ನಮ್ಮ ತಂಡದ ನಾಯಕ ಮತ್ತು ನಾವು ನಾಯಕನ ಸುತ್ತ ಇಡೀ ತಂಡವನ್ನು ಕಟ್ಟಬೇಕು. ಅವರು ಉತ್ತಮ ನಾಯಕನಾಗಿರುವ ಕಾರಣದಿಂದಲೇ ನಾವು ಅವರನ್ನು 2022 ರಲ್ಲಿ ತಂಡಕ್ಕೆ ಆಯ್ಕೆ ಮಾಡಿದ್ದೆವು. ಇನ್ನೂ ರಿಟೇನ್ (Retain) ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಸ್ಪರ ಒಪ್ಪಿಗೆ ಅಗತ್ಯವಿದ್ದು, ಶ್ರೇಯಸ್ ಅಯ್ಯರ್ (Shreyas Iyer) ಕಡೆಯಿಂದ ಆ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಫ್ರಾಂಚೈಸ್ನಿಂದಲೂ ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಈ ಒಪ್ಪಂದದ ನಡುವೆ ಹಣದಂತಹ ಕೆಲವು ಅಂಶಗಳು ಬಂದಾಗ ಮತ್ತು ಯಾರಾದರೂ ಒಬ್ಬ ಆಟಗಾರ ತನ್ನ ಮಾರುಕಟ್ಟೆ ಮೌಲ್ಯವನ್ನು ಪರೀಕ್ಷಿಸಲು ಬಯಸಿದಾಗ ನಮ್ಮಿಂದ ಏನನ್ನು ಮಾಡಲು ಸಾಧ್ಯವಾಗುವುದಿಲ್ಲ. ಅಯ್ಯರ್ ಕೂಡ ಹರಾಜಿನಲ್ಲಿ ತನ್ನ ಮೌಲ್ಯವನ್ನು ನೋಡಲು ಬಯಸಿದರು ಹೀಗಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದಾಗ್ಯೂ ಶ್ರೇಯಸ್ ಹಾಗೂ ನಮ್ಮ ನಡುವಿನ ಸಂಬಂಧ ಉತ್ತಮವಾಗಿದೆ. ಒಬ್ಬ ಆಟಗಾರ ಹರಾಜಿನಲ್ಲಿ ತನ್ನ ಮೌಲ್ಯವನ್ನು ಪರೀಕ್ಷಿಸುವ ನಿರ್ಧಾರವನ್ನು ನಾವು ಯಾವಾಗಲೂ ಬೆಂಬಲಿಸುತ್ತೇವೆ ಎಂದು ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು ಸ್ಪಷ್ಟಪಡಿಸಿದ್ದಾರೆ.
30 ಕೋಟಿಗೆ ಬೇಡಿಕೆ
ಇದೇ ಸಂದರ್ಭದಲ್ಲಿ ತಂಡದಲ್ಲಿ ಉಳಿಯಲು ಶ್ರೇಯಸ್ ಅಯ್ಯರ್ ಕೆಕೆಆರ್ ಮ್ಯಾನೇಜ್ಮೆಂಟ್ ಬಳಿ 30 ಕೋಟಿ ರೂಪಾಯಿ ಕೇಳಿದ್ದರು ಎಂದು ವರದಿಗಳಾಗಿವೆ. ಈ ಮೊತ್ತವನ್ನು ಕೇಳಿ ಶಾಕ್ ಆದ ಮ್ಯಾನೇಜ್ಮೆಂಟ್ ಅದನ್ನು ಪಾವತಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯುವ ಭರವಸೆಯನ್ನು ಶ್ರೇಯಸ್ ಹೊಂದಿದ್ದರು. ಈ ಕಾರಣಕ್ಕೆ ತಂಡದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.
2022ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕಲ್ಕತ್ತಾ ನೈಟ್ರೈಡರ್ಸ್ (KKR) ಪಾಲಾಗಿದ್ದ ಶ್ರೇಯಸ್ ಅಯ್ಯರ್, 2023ರಲ್ಲಿ ಗಾಯದ ಸಮಸ್ಯೆಯಿಂದ ಕಣಕ್ಕಿಳಿದಿರಲಿಲ್ಲ. 2024ರಲ್ಲಿ ನಾಯಕನಾಗಿ ಮತ್ತೊಮ್ಮೆ ಎಂಟ್ರಿ ಕೊಟ್ಟ ಶ್ರೇಯಸ್ (Shreyas Iyer) ಕೆಕೆಆರ್ (KKR) ತಂಡದ 10 ವರ್ಷಗಳ ಟ್ರೋಫಿ ಬರವನ್ನು ನೀಗಿಸಿದ್ದರು. ಆದರೆ ಶ್ರೇಯಸ್ (Shreyas Iyer) ಹೊರತುಪಡಿಸಿ, ಫ್ರಾಂಚೈಸಿ ರಿಟೇನ್ (Retain) ಪಟ್ಟಿಯಲ್ಲಿ ಇತರ ಆರು ಆಟಗಾರರನ್ನು ಉಳಿಸಿಕೊಂಡಿದೆ. (ಏಜೆನ್ಸೀಸ್)