

ಬಹುಭಾಷಾ ನಟಿ ಶ್ರೀಯಾ ಸರಣ್ ಸದ್ಯ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್ಆರ್ಆರ್’ ಚಿತ್ರತಂಡಕ್ಕೆ ಆಯ್ಕೆಯಾಗಿದ್ದು ಒಂದೆಡೆಯಾದರೆ, ‘ಗಮನಂ’ ಚಿತ್ರದ ಮೂಲಕ ಹೊಸ ಸಾಹಸಕ್ಕೂ ಶ್ರೀಯಾ ಇಳಿದಿದ್ದಾರೆ. ಈ ಎರಡರ ಪೈಕಿ ರಾಜಮೌಳಿ ‘ಆರ್ಆರ್ಆರ್’ ಚಿತ್ರದಲ್ಲಿ ಅಜಯ್ ದೇವಗನ್ ಪತ್ನಿಯಾಗಿ ಶ್ರೀಯಾ ಕಾಣಿಸಿಕೊಳ್ಳಲಿದ್ದಾರೆ.
2005ರಲ್ಲಿ ರಾಜಮೌಳಿ ನಿರ್ದೇಶನದ ತೆಲುಗಿನ ‘ಛತ್ರಪತಿ’ ಚಿತ್ರದಲ್ಲಿ ಶ್ರೀಯಾ ನಟಿಸಿದ್ದರು. ಇದೀಗ ಸುದೀರ್ಘ 15 ವರ್ಷಗಳ ಬಳಿಕ ಮತ್ತೆ ಅವರೊಟ್ಟಿಗೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಸೆ.11ರಂದು ಶ್ರೀಯಾ ಹುಟ್ಟುಹಬ್ಬ. ಆ ಪ್ರಯುಕ್ತ ಅವರ ಬಹುಭಾಷಾ ಸಿನಿಮಾ ‘ಗಮನಂ’ ಫಸ್ಟ್ ಲುಕ್ ಸಹ ಬಿಡುಗಡೆಯಾಗಿತ್ತು. ನಾಯಕಿ ಪ್ರಧಾನವಾದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿದ್ಧವಾಗಲಿದೆ. ಡಿ ಗ್ಲಾಮ್ ಅವತಾರದಲ್ಲಿ ಶ್ರೀಯಾ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ನವ ನಿರ್ದೇಶಕಿ ಸುಜನಾ ರಾವ್ ಆಕ್ಷನ್ ಕಟ್ ಹೇಳಲಿದ್ದಾರೆ. ಕನ್ನಡದಲ್ಲಿ ಈ ಹಿಂದೆ ನೆನಪಿರಲಿ ಪ್ರೇಮ್ ನಾಯಕತ್ವದ ‘ಚಂದ್ರ’ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಸ್ಯಾಂಡಲ್ವುಡ್ಗೆ ಶ್ರೀಯಾ ಎಂಟ್ರಿಕೊಟ್ಟಿದ್ದರು.