

ಧನಂಜಯ ಗುರುಪುರ ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲೆ ಮೇಲ್ಮನೆ ಎಂಬಲ್ಲಿ ಸಾರ್ವಜನಿಕರ ತೀವ್ರ ಹೋರಾಟದ ಫಲವಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲಾಗಿದ್ದು, ಈ ಭಾಗದ ಶಾಲಾ ಕಾಲೇಜುಗಳ ಬಸ್ ಮತ್ತು ಸರ್ಕಾರಿ ಬಸ್‌ಗಳ ಸಂಚಾರ ಪುನಃ ಆರಂಭಗೊಂಡಿದೆ. ಕಳೆದ ಮೂರು ತಿಂಗಳ ಹಿಂದೆ ಫಲ್ಗುಣಿ ನದಿಯ ತೋಡಿಗೆ ನಿರ್ಮಿಸಲಾಗಿದ್ದ ಹಳೇ ಕಿರು ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದೀಗ ಈ ಸೇತುವೆ ಪಕ್ಕದಲ್ಲೇ ಅಂದಾಜು 3-4 ಲಕ್ಷ ರೂ. ವೆಚ್ಚದಲ್ಲಿ ಮಣ್ಣಿನ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಇದು ಮುಂದಿನ ಮಳೆಗಾಲದವರೆಗೆ ಊರ್ಜಿತದಲ್ಲಿರುತ್ತದೆ. ತಾತ್ಕಾಲಿಕ ರಸ್ತೆ ನಿರ್ಮಿಸುವಂತೆ ಉಳಾಯಿಬೆಟ್ಟು ಪಂಚಾಯಿತಿ ಅಧ್ಯಕ್ಷ ಹರಿಕೇಶ್ ಶೆಟ್ಟಿ ಮುಂದಾಳತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಹೊಸ ಕಿರು ಸೇತುವೆ ನಿರ್ಮಿಸಲು 5 ಕೋಟಿ ರೂ. ಅನುದಾನದ ಬಗ್ಗೆ ಜಿಲ್ಲಾಡಳಿತ ಪ್ರಸ್ತಾವಿಸಿದ್ದರೂ ಸಾರ್ವಜನಿಕರ ಬೇಡಿಕೆಯಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು, ವಯೋವೃದ್ಧರಿಗೆ ಅನುಕೂಲವಾಗುವಂತೆ ಇಲ್ಲೊಂದು ತಾತ್ಕಾಲಿಕ ರಸ್ತೆ ನಿರ್ಮಿಸಲು ಜಿಲ್ಲಾಡಳಿತ ಆಸಕ್ತಿ ವಹಿಸಿಲ್ಲ. ಮನವಿಗಳಿಗೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತ ಮತ್ತು ಪಿಡಬ್ಲುೃಡಿ ನಿರಾಸಕ್ತಿ ವಿರುದ್ಧ ಧ್ವನಿ ಎತ್ತಿದ್ದರು. *ರಸ್ತೆ ನಿರ್ವಾಣಕ್ಕೆ ಶಾಸಕರ ನೆರವು: ಪ್ರತಿಭಟನಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದ ಸ್ಥಳೀಯ ಶಾಸಕ ಡಾ.ಭರತ್ ಶೆಟ್ಟಿ ಅವರು ತಾತ್ಕಾಲಿಕ ರಸ್ತೆ ನಿರ್ಮಿಸಲು ವೈಯಕ್ತಿಕ 2 ಲಕ್ಷ ರೂ. ನೀಡುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಳಾಯಿಬೆಟ್ಟಿನ ಸಾಲೆ ಮೇಲ್ಮನೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ವಾಣಗೊಂಡಿದೆ. ಈ ಮೂಲಕ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಬಸ್ ಸಂಚಾರಕ್ಕೆ ಅನುಕೂಲವಾಗಿರುವುದಲ್ಲದೆ ಮಂಗಳೂರು, ಉಳಾಯಿಬೆಟ್ಟು, ಪೆರ್ಮಂಕಿ, ಮಲ್ಲೂರು, ಬೆಂಜನಪದವು, ನೀರುವಾರ್ಗ, ಬಿ.ಸಿ.ರೋಡ್ ಮತ್ತಿತರ ಭಾಗಗಳ ಜನರು ನಿಟ್ಟುಸಿರು ಬಿಡುವಂತಾಗಿದೆ. ಸೇತುವೆ ಶಿಥಿಲಗೊಂಡಿದೆಯೇ? ಉಳಾಯಿಬೆಟ್ಟು ಕಿರು ಸೇತುವೆಯಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಿದ ಪ್ರಕಟಣೆ ಹೊರಡಿಸಿದ್ದರೂ ಇಲ್ಲಿ ಶಾಲಾ ಕಾಲೇಜುಗಳ ಬಸ್‌ಗಳು ಮತ್ತು ಸರ್ಕಾರಿ ಬಸ್‌ಗಳ ಸಂಚಾರ ನಿಷೇಧಗೊಂಡಿದೆಯೇ ಹೊರತು ಅತಿಯಾದ ಭಾರ ಹೊತ್ತ ಮರಳು, ಜಲ್ಲಿ, ಕಲ್ಲು ಮತ್ತಿತರ ಸರಕು ಸೊತ್ತು ಸಂಚರಿಸುವ ಭಾರಿ ವಾಹನಗಳಿಗೆ ನಿಷೇಧ ಅನ್ವಯಿಸಿದಂತಿಲ್ಲ. ಪ್ರತಿ ನಿತ್ಯ ಭಾರಿ ವಾಹನಗಳು ಸಂಚರಿಸುತ್ತಿವೆ. ಬಡಪಾಯಿಗಳಿಗೆ ನಿಷೇಧ ಎಂಬ ಭೀತಿಯ ಹೇರಿಕೆಯೇ? ಎಂದು ಸ್ಥಳೀಯರೊಬ್ಬರು ಜಿಲ್ಲಾಡಳಿತಕ್ಕೆ ಸವಾಲೆಸೆದಿದ್ದಾರೆ.
ಕಿರು ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧದ ಬಳಿಕ ಈ ಭಾಗದ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಹಿಡಿಯಲು ಮುಖ್ಯ ರಸ್ತೆಗೆ ಬರಬೇಕಿದ್ದರೆ 5-6 ಕಿ.ಮೀ. ಸುತ್ತಿ ಬಳಸಿ ನಡೆಯಬೇಕಿತ್ತು. ಜನರ ಪ್ರಯಾಣ ಮತ್ತು ರಿಕ್ಷಾ ಬಾಡಿಗೆ ದುಬಾರಿಯಾಗಿತ್ತು. ಕಿರು ಸೇತುವೆ ಪಕ್ಕದಲ್ಲಿ ಮಣ್ಣಿನ ರಸ್ತೆ ನಿವಾರ್ಣದಿಂದ ಜನರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದಂತಾಗಿದೆ. | ಹರಿಕೇಶ್ ಶೆಟ್ಟಿ, ಉಳಾಯಿಬೆಟ್ಟು ಗ್ರಾಪಂ ಅಧ್ಯಕ್ಷ ತಾತ್ಕಾಲಿಕ ರಸ್ತೆ ನಿರ್ಮಿಸಲು ಪ್ರಯತ್ನಿಸಿರುವ ಉಳಾಯಿಬೆಟ್ಟು ಜನಪ್ರತಿನಿಧಿಗಳು, ಮುಖಂಡರ ಶ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೊಸದಾಗಿ ನಿರ್ಮಿಸಲಾದ ತಾತ್ಕಾಲಿಕ ಮಣ್ಣಿನ ರಸ್ತೆಗೆ ಮೂರು ಬೃಹತ್ ಸಿಮೆಂಟ್ ಪೈಪ್ ಅಳವಡಿಸಲಾಗಿದೆ. ಇದರಲ್ಲಿ ಮರಳು ತುಂಬಿದ ಲಾರಿಗಳು ಮತ್ತು ಅತಿಯಾದ ಭಾರ ಹೊತ್ತ ವಾಹನಗಳು ಸಂಚರಿಸುವಂತಿಲ್ಲ. ನೀರಿಗೆ ಮಣ್ಣು ಹಾಕಿ ನಿರ್ಮಿಸಲಾದ ಈ ರಸ್ತೆ ಅತಿ ಭಾರಕ್ಕೆ ಹೂತು ಹೋಗುವ ಸಾಧ್ಯತೆ ಇದೆ. | ವಿಶ್ವನಾಥ ಶೆಟ್ಟಿ, ಉಳಾಯಿಬೆಟ್ಟು ಪಂಚಾಯಿತಿ ಸದಸ್ಯ