ಪಾಲಕ್ಕಾಡ್: ಶೋರ್ನೂರ್ ಸೇತುವೆಯಲ್ಲಿ ಸ್ವಚ್ಛತಾ ಕಾರ್ಯದ ವೇಳೆ ರೈಲಿಗೆ ಸಿಲುಕಿ ನಾಲ್ವರು ಮೃತಪಟ್ಟ ದುರ್ಘಟನೆ ಪಾಲಕ್ಕಾಡ್ನ ಶೋರೂರ್ನಲ್ಲಿ ಸಂಭವಿಸಿದೆ. ರೈಲು ಬರುವ ಮಾಹಿತಿ ಪಡೆಯದ ಕಾರ್ಮಿಕರು, ಸೇತುವೆಯಲ್ಲಿದ್ದ ಕಸವನ್ನು ಹೊರತೆಗೆಯುವ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ರೈಲು ಬರುತ್ತಿದ್ದನ್ನು ಕಂಡು ಅದೇ ಹಳಿಯ ಮೇಲೆ ಓಡಲು ಪ್ರಾರಂಭಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಅವರೆಲ್ಲಾ ಪಕ್ಕದ ಹಳಿಯನ್ನು ಹತ್ತುವುದರೊಳಗೆ ರೈಲು ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ: 8 ಕೋಟಿ ರೂ. ಮೌಲ್ಯದ 54,000 ಸಿರಪ್ ಬಾಟಲಿ ಪೊಲೀಸರ ವಶಕ್ಕೆ! ಕಾರಣ ಹೀಗಿದೆ | Cough Syrup
ಶೋಧಕಾರ್ಯ ಅಂತ್ಯ
ಮೃತರನ್ನು ತಮಿಳುನಾಡು ಮೂಲದ ಲಕ್ಷ್ಮಣನ್, ರಾಣಿ ಮತ್ತು ವಲ್ಲಿ ಎಂದು ಗುರುತಿಸಲಾಗಿದೆ. ರಾಣಿ ಮತ್ತು ವಲ್ಲಿ ಇಬ್ಬರು ಸಹೋದರಿಯರು. ನಾಲ್ಕನೇ ವ್ಯಕ್ತಿ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಕಾಣದ ಜಾಗಕ್ಕೆ ಹಾರಿಬಿದ್ದ ಕಾರಣ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಮೃತದೇಹವು ಛಿದ್ರಗೊಂಡಿದ್ದು, ನಾಪತ್ತೆಯಾದವರ ಗುರುತು ಅಸ್ಪಷ್ಟವಾಗಿದೆ. ಇಂದು ನದಿಯಲ್ಲಿ ಶೋಧಕಾರ್ಯ ಅಂತ್ಯಗೊಂಡಿದೆ. ನಾಳೆ (ನ.03) ಬೆಳಗ್ಗೆ ಓರ್ವ ವ್ಯಕ್ತಿಯ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಸುರಕ್ಷತಾ ಮುನ್ನೆಚ್ಚರಿಕೆ ವಹಿಸದೆ ಕಾರ್ಮಿಕರಿಗೆ ಉದ್ಯೋಗ
ನಾಲ್ವರೂ ರೈಲ್ವೆಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. ಕೇಂದ್ರ ಸಚಿವರ ಭೇಟಿಯ ಹಿನ್ನೆಲೆಯಲ್ಲಿ ಆವರಣವನ್ನು ಸ್ವಚ್ಛಗೊಳಿಸಲು ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ದುರಂತದಲ್ಲಿ ಸಾವನ್ನಪ್ಪಿದ ನಾಲ್ವರು ಒಟ್ಟಪಾಲಂನಲ್ಲಿ ಕಳೆದ ಐದು ವರ್ಷಗಳಿಂದ ವಾಸವಾಗಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಸುರಕ್ಷತಾ ಮುನ್ನೆಚ್ಚರಿಕೆ ವಹಿಸದೆ ಕಾರ್ಮಿಕರಿಗೆ ಉದ್ಯೋಗ ನೀಡಿರುವ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹವು ಕೇಳಿ ಬಂದಿದೆ.
ನದಿಗೆ ಜಿಗಿದಿದ್ದರೇ ಪ್ರಾಣಾಪಾಯದಿಂದ ಪಾರು
ರೈಲ್ವೆ ಹಳಿ ಸ್ವಚ್ಛಗೊಳಿಸುವಾಗ ಕೇರಳ ಎಕ್ಸ್ಪ್ರೆಸ್ ಆಗಮಿಸಿತು. ರೈಲು ವೇಗವಾಗಿ ಬರುತ್ತಿದ್ದದ್ದನ್ನು ಗಮನಿಸಿದ ಅವರು, ಭಯದಿಂದ ಟ್ರೈನ್ ಸಾಗುತ್ತಿದ್ದ ಮಾರ್ಗದಲ್ಲಿಯೇ ಓಡಿದರು. ಈ ವೇಳೆ ತಪ್ಪಿಸಿಕೊಳ್ಳಲು ಅಕ್ಕ-ಪಕ್ಕ ನದಿ ಬಿಟ್ಟರೆ, ಸೂಕ್ತ ಜಾಗವಿರಲಿಲ್ಲ. ನೀರಿಗೆ ಹಾರುವ ಮುನ್ನವೇ ರೈಲು ನಾಲ್ವರಿಗೆ ಡಿಕ್ಕಿ ಹೊಡೆಯಿತು. ಒಂದು ವೇಳೆ ಅವರೆಲ್ಲರೂ ನದಿಗೆ ಜಿಗಿದಿದ್ದರೇ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆಗಳಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ,(ಏಜೆನ್ಸೀಸ್).
ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ | Petrol