ಶಾಕಿಂಗ್- ಅರುಣಾಚಲದ ಐವರು ಯುವಕರನ್ನು ಅಪಹರಿಸಿದ ಚೀನಾ ಸೇನೆ !

PLA
Published on

ಇಟಾನಗರ: ಭಾರತದೊಂದಿಗೆ ಗಡಿ ಸಂಘರ್ಷಕ್ಕೆ ಇಳಿದಿರುವ ಚೀನಾ ತನ್ನ ಭಯೋತ್ಪಾದನೆಯ ಮತ್ತೊಂದು ಮುಖವನ್ನು ತೋರತೊಡಗಿದೆಯೇ? ಹೌದು ಎನ್ನುತ್ತಿದ್ದಾರೆ ಅರುಣಾಚಲ ಪ್ರದೇಶದ ಗಡಿಭಾಗದ ಜನರು. ಅಲ್ಲಿನ ಐವರು ಯುವಕರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್​ಎ) ಅಪಹರಿಸಿದ್ದಾಗಿ ಮಾಜಿ ಕೇಂದ್ರ ಸಚಿವ, ಪಾಸಿಘಾಟ್ ವೆಸ್ಟ್ ಕ್ಷೇತ್ರದ ಶಾಸಕ ನಿನೊಂಗ್ ಎರಿಂಗ್​ ಟ್ವೀಟ್ ಮಾಡಿದ್ದಾರೆ!

ಭಾರತ-ಚೀನಾ ಗಡಿ ಭಾಗದ ಸಮೀಪ ಸೆರಾ 7 ಪ್ರದೇಶದಲ್ಲಿ ಅರುಣಾಚಲ ಪ್ರದೇಶದ ಅಪ್ಪರ್​ ಸಬನ್​ಸಿರಿ ಜಿಲ್ಲೆಯ ನಾಚೋ ವೃತ್ತದ ಐವರು ಯುವಕರನ್ನು ಚೀನಾ ಪಿಎಲ್​ಎ ಅಪಹರಿಸಿದೆ. ಅಪಹರಣಕ್ಕೆ ಒಳಗಾದವರನ್ನು ತನು ಬಾಕಡ್​, ಪ್ರಶಾಂತ್​ ರಿಂಗ್ಲಿಂಗ್, ನಗ್ರು ದಿರಿ, ದೊನ್​ಗ್ಟು ಎಬಿಯಾ ಮತ್ತು ತೋಚ್​ ಸಿಂಗ್​ಕಾಮ್​ ಎಂಬ ತಾಗಿನ್ ಸಮುದಾಯದ ಯುವಕರು ಎಂದು ಗುರುತಿಸಲಾಗಿದೆ.

ಪ್ರಕಾಶ್ ರಿಂಗ್ಲಿಂಗ್ ಎಂಬುವವರು ಫೇಸ್​ಬುಕ್​ನಲ್ಲಿ ಈ ಸಂಬಂಧ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ನನ್ನ ಸಹೋದರ ಪ್ರಸಾದ್ ರಿಂಗ್ಲಿಂಗ್​ ಮತ್ತು ಇತರೆ ನಾಲ್ವರನ್ನು ಸೆರಾ 7ರಲ್ಲಿ ಪಿಎಲ್​ಎ ಅಪಹರಿಸಿದೆ. ಹೀಗಾಗಿ ಅರುಣಾಚಲ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕೂಡಲೇ ಈ ಹುಡುಗರನ್ನು ಸುರಕ್ಷಿತವಾಗಿ ಮನೆಗೆ ಕರೆತರುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅದರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಇನ್ನೂ ಅಧಿಕೃತವಾಗಿ ದೂರು ದಾಖಲಾಗಿಲ್ಲ ಎಂದು ಅಪ್ಪರ್ ಸಬನ್​ಸಿರಿ ಜಿಲ್ಲೆಯ ಎಸ್​ಪಿ ತಾರು ಗುಸಾರ್ ತಿಳಿಸಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್ ನಮ್ಮ ಗಮನಕ್ಕೆ ಬಂದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಏತನ್ಮಧ್ಯೆ, ಪಾಸಿಘಾಟ್ ವೆಸ್ಟ್​ ಶಾಸಕ ನಿನೊಂಗ್ ಎರಿಂಗ್ ಶನಿವಾರ ಮುಂಜಾನೆ 5.08 ನಿಮಷಕ್ಕೆ ಟ್ವೀಟ್​ ಮಾಡಿದ್ದು, ಶಾಕಿಂಗ್ ನ್ಯೂಸ್​ - ಅಪ್ಪರ್​ ಸಬನ್​ಸಿರಿ ಜಿಲ್ಲೆಯ ಐವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಪಹರಿಸಿದೆ ಎಂದು ಹೇಳಲಾಗುತ್ತಿದೆ ಎಂಬ ಸ್ಟೇಟಸ್ ಜತೆಗೆ ಫೇಸ್​ಬುಕ್ ಪೋಸ್ಟ್​ನ ಸ್ಕ್ರೀನ್ ಶಾಟ್, ಅರುಣಾಚಲ ಟೈಮ್ಸ್​​ನ ವರದಿಯ ಲಿಂಕ್​ ಕೂಡ ಸೇರಿ ಕೇಂದ್ರ ಸರ್ಕಾರದ ಗಮನಸೆಳೆದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net