

ಮಾಸ್ಕೋ/ನವದೆಹಲಿ: ಗಡಿ ಸಂಘರ್ಷಕ್ಕೆ ಇಳಿದಿರುವ ಚೀನಾದ ರಕ್ಷಣಾ ಸಚಿವ ಜನರಲ್ ವೇಯ್ ಫೆಂಘೆ ಮಾಸ್ಕೋದಲ್ಲಿ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್(ಎಸ್ಸಿಒ)ನ ಸಭೆಯ ವಿರಾಮದ ನಡುವೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜತೆಗೆ ಮಾತುಕತೆಗೆ ಇಚ್ಛೆ ವ್ಯಕ್ತಪಡಿಸಿದ್ದರು. ಪೂರ್ವ ನಿರ್ಧರಿತವಲ್ಲದ ಈ ಮಾತುಕತೆ ನಿನ್ನೆ ಎರಡೂವರೆ ಗಂಟೆ ಕಾಲ ನಡೆದಿತ್ತು ಎಂದು ರಕ್ಷಣಾ ಸಚಿವರ ಕಚೇರಿ ಟ್ವೀಟ್ ಮೂಲಕ ಬಹಿರಂಗಪಡಿಸಿದೆ.
ಮೇ ತಿಂಗಳ ಆರಂಭದಿಂದಲೇ ಚೀನಾ ಅತಿಕ್ರಮಣಕ್ಕೆ ಮುಂದಾಗಿದ್ದು, ನಿತ್ಯವೂ ಮುನ್ನುಗ್ಗಲು ಪ್ರಯತ್ನಿಸುತ್ತಿದೆ. ಭಾರತೀಯ ಸೇನೆ ಚೀನಾ ಸೇನೆಯ ಈ ಅತಿಕ್ರಮಣಕ್ಕೆ ತಿರುಗೇಟು ನೀಡುತ್ತಿರವುದು ಚೀನಾಕ್ಕೆ ನುಂಗಲಾರದ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಮಾತುಕತೆ ನಡೆದಿತ್ತು. ಇದರಲ್ಲಿ ರಕ್ಷಣಾ ಸಚಿವರ ಜತೆಗೆ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ರಷ್ಯಾದಲ್ಲಿನ ಭಾರತದ ರಾಯಭಾರಿ ಬಿ.ವೆಂಕಟೇಶ್ ವರ್ಮಾ ಉಪಸ್ಥಿತರಿದ್ದರು. ರಕ್ಷಣಾ ಸಚಿವರ ಮಾತುಕತೆಯ ವೇಳೆಯೂ ಭಾರತ ಸ್ಪಷ್ಟವಾಗಿ ಲಡಾಕ್ನಲ್ಲಿ ಈ ಹಿಂದಿನ ಯಥಾಸ್ಥಿತಿ ಕಾಪಾಡಲು ಸೂಚಿಸಿದೆ. ಇದಕ್ಕೂ ಮುನ್ನ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಜತೆಗೆ ಟೆಲಿಫೋನ್ ಮೂಲಕ ಸಂಭಾಷಣೆ ನಡೆಸಿ ಲಡಾಕ್ ಭಾಗದಲ್ಲಿ ಬೆಳವಣಿಗೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಚೀನಾ ಆಧಿಪತ್ಯ ಅಂತ್ಯಕ್ಕೆ ಪ್ಲ್ಯಾನ್
ಎಸ್ಸಿಒ ಸಭೆಯಲ್ಲಿ ಎರಡನೇ ಮಹಾಯುದ್ಧದ ಸನ್ನಿವೇಶಗಳನ್ನು ಸ್ಮರಿಸಿಕೊಂಡ ರಾಜನಾಥ್ ಸಿಂಗ್, ಎಸ್ಸಿಒ ಸದಸ್ಯ ರಾಷ್ಟ್ರಗಳಾಗಿ ಪರಸ್ಪರ ವಿಶ್ವಾಸ, ಸೌಹಾರ್ದತೆ, ಅಂತಾರಾಷ್ಟ್ರೀಯ ನಿಯಮ ಪಾಲನೆ, ಪರಸ್ಪರ ಹಿತವನ್ನು ಕಾಯವುದು ಮಾಡಬೇಕು. ಅತಿಕ್ರಮಣ ಒಳ್ಳೆಯದಲ್ಲ. ಹಿಂದಿನ ಯುದ್ಧಗಳಿಂದ ನಾವು ಪಾಠ ಕಲಿಯಬೇಕು ಎಂದು ಚೀನಾಕ್ಕೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದರು. (ಏಜೆನ್ಸೀಸ್)