ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನನ್ನು ಹಿಂಬಾಲಿಸಿದ ಪೊಲೀಸರಿಗೆ ಶಾಕ್​! ಆತನ ಕೈಯಲ್ಲಿತ್ತು ಲಕ್ಷ ಲಕ್ಷ ಹಣ, ಕೆಜಿಗಟ್ಟಲೆ ಬಂಗಾರ

gold drunker case
Published on

ಬೆಂಗಳೂರು: ನಗರದಲ್ಲಿ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ತೂರಾಡ್ತಿದ್ದವನ ಬಳಿ ಲಕ್ಷಗಟ್ಟಲೆ ಹಣ, ಕೆಜಿಗಟ್ಟಲೆ ಚಿನ್ನ ಪತ್ತೆಯಾಗಿದೆ!

ನಗರದ ಎಸ್​ಪಿ ರಸ್ತೆಯಲ್ಲಿ ಭಾನುವಾರ ರಾತ್ರಿ ವಿನೋದ್​ ಎಂಬಾತ ಕುಡಿದ ಅಮಲಿನಲ್ಲಿ ಬ್ಯಾಗ್​ ಹಿಡಿದುಕೊಂಡು ನಡುರಸ್ತೆಯಲ್ಲಿ ತೂರಾಡುತ್ತಾ ಹೋಗುತ್ತಿದ್ದ. ಇದನ್ನು ಕಂಡ ಇಬ್ಬರು ಬೀಟ್​ ಪೊಲೀಸರು ಕುಡುಕನ ಬಳಿ ಹೋಗುತ್ತಿದ್ದಂತೆ ಆತ ಬ್ಯಾಗ್​ ಸಮೇತ ಓಡಿದ್ದಾನೆ. ಅನುಮಾನಗೊಂಡ ಪೊಲೀಸರು ಆತನನ್ನ ಹಿಂಬಾಲಿಸಿದ್ದಾರೆ. ಕಿ.ಮೀ. ದೂರದವರೆಗೂ ಓಡಿ ಆತನನ್ನು ಹಿಡಿದರು. ಅವನ ಕೈಯಲ್ಲಿದ್ದ 2 ಬ್ಯಾಗ್ ಅನ್ನು ಪರಿಶೀಲಿಸಿದ ಪೊಲೀಸರೇ ಶಾಕ್​ ಆಗಿದ್ದಾರೆ. ಒಂದು ಬ್ಯಾಗ್​ನಲ್ಲಿ ದಾಖಲೆ ಇಲ್ಲದ 22 ಲಕ್ಷ ಹಣ, ಮತ್ತೊಂದು ಬ್ಯಾಗ್​ನಲ್ಲಿ ಒಂದೂ ಮುಕ್ಕಾಲು ಕೆಜಿ ಚಿನ್ನ ಸಿಕ್ಕಿದೆ. ಇದರಲ್ಲಿ ಸರಗಳು, ಚಿನ್ನದ ಬಳೆಗಳು, ಗೋಲ್ಡ್​ ಬಿಸ್ಕೆಟ್​ಗಳೂ ಇದ್ದವು.

ಕೂಡಲೇ ಆತನ್ನು ವಶಕ್ಕೆ ಪಡೆದ ಪೊಲೀಸರು, ಬ್ಯಾಗ್​ಗಳ ಸಮೇತ ಎಸ್​ಜೆ ಪಾರ್ಕ್ ಠಾಣೆಗೆ ಕರೆತಂದಿದ್ದಾರೆ. ಆದರೆ ಹಣ ಮತ್ತು ಚಿನ್ನಾಭರಣಕ್ಕೆ ದಾಖಲೆಯೇ ಇಲ್ಲ. ಮೂಲ ಹುಡುಕಿದಾಗ ಚೆನೈನ ಪ್ರತಿಷ್ಠಿತ ಜುವೆಲ್ಲರಿ ಮಾಲ್​ನದ್ದು ಎಂದು ಗೊತ್ತಾಗಿದೆ. ಹವಾಲ ಮೂಲಕ ವ್ಯವಹಾರ ‌ಮಾಡಿರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಚೆನ್ನೈನ ಜುವೆಲ್ಲರಿ ಶಾಪ್​ನ ಮಾಲೀಕನಿಗೆ ನೋಟಿಸ್​ ನೀಡಲಾಗಿದೆ. ಇನ್ನು ಪೊಲೀಸ್​ ಸಿಬ್ಬಂದಿಯ ಕಾರ್ಯಕ್ಷಮತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net