ಮಕ್ಕಳ ಸ್ಕೂಲ್ ಬ್ಯಾಗ್‌ಗಳಲ್ಲಿ ಕಾಂಡೋಮ್, ಗರ್ಭನಿರೋಧಕ ಮಾತ್ರೆ, ಸಿಗರೇಟ್‌, ವೈಟ್‌ನರ್‌ ಪತ್ತೆ! ಬೆಂಗಳೂರಲ್ಲಿ ಆಘಾತಕಾರಿ ಪ್ರಕರಣ ಬಯಲು

Condom
Published on

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ಗಳು, ಲೈಟರ್‌, ಸಿಗರೇಟ್‌ಗಳು, ವೈಟ್‌ನರ್‌ಗಳು...! ಅಷ್ಟೇ ಅಲ್ಲ ಗರ್ಭನಿರೋಧಕ ಮಾತ್ರೆ(ಐ-ಪಿಲ್), ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವುದೂ ಪತ್ತೆಯಾಗಿದೆ! ಅಯ್ಯೋ, ಇದ್ಹೇನಿದು? ಈ ಘಟನೆ ನಡೆದದ್ದು ಚೀನಾದಲ್ಲೋ? ಅಮೆರಿಕದಲ್ಲೋ ಅಂತ ಕೇಳಬೇಡಿ. ಇದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಕಂಡುಬಂದಿರುವ ಆಘಾತಕಾರಿ ಸಂಗತಿ.

ತರಗತಿಗೆ ವಿದ್ಯಾರ್ಥಿಗಳು ಮೊಬೈಲ್‌ ಫೋನ್‌ ತರುತ್ತಾರೆ, ಅದರಿಂದ ಕಿರಿಕಿರಿ ಆಗುತ್ತಿದೆ ಎಂದು ಶಿಕ್ಷಕರು ಇತ್ತೀಚೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕಾಮ್ಸ್) ತನ್ನ ಸದಸ್ಯ ಶಾಲೆಗಳಿಗೆ ಸೂಚಿಸಿತ್ತು. ಹಾಗೆ ವಿದ್ಯಾರ್ಥಿಗಳ ಬ್ಯಾಗ್‌ಗಳನ್ನು ಚೆಕ್ ಮಾಡಿದ ಶಿಕ್ಷಕರಿಗೆ ಆಘಾತ ಕಾದಿತ್ತು.

ಪ್ರೌಢಶಾಲೆಗಳ 8, 9 ಮತ್ತು 10ನೇ ತರಗತಿಯ ಕೆಲ ವಿದ್ಯಾರ್ಥಿಗಳ ಬ್ಯಾಗ್‌ಗಳಲ್ಲಿ ಕಾಂಡೋಮ್‌ಗಳು, ಗರ್ಭ ನಿರೋಧಕ ಮಾತ್ರೆಗಳು, ಲೈಟರ್‌, ಸಿಗರೇಟ್‌ಗಳು, ವೈಟ್‌ನರ್‌ಗಳು ಮುಂತಾದ ವಸ್ತುಗಳು ಸಿಕ್ಕಿವೆ. ಒಂದು ಶಾಲೆಯ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗರ್ಭ ನಿರೋಧಕ ಮಾತ್ರೆ (ಐ-ಪಿಲ್) ಕಂಡುಬಂದಿವೆ. ನೀರಿನ ಬಾಟಲಿಗಳಲ್ಲಿ ಆಲ್ಕೋಹಾಲ್ ಇರುವುದೂ ಪತ್ತೆಯಾಗಿದೆ.

ಈ ವಿಷಯವನ್ನು ಈಗಾಗಲೇ ಶಿಕ್ಷಕರು ಸಂಬಂಧಪಟ್ಟ ಪಾಲಕರಿಗೆ ತಿಳಿಸಿದ್ದಾರೆ. ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವ ಬದಲು ಅವರಿಗೆ ಕೌನ್ಸೆಲಿಂಗ್ ಕೊಡಿಸಲು ಶಾಲೆ ಆಡಳಿತ ಮಂಡಳಿಯವರು ಮತ್ತು ಪಾಲಕರು ಮುಂದಾಗಿದ್ದಾರೆ.

10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳ ಬ್ಯಾಗ್‌ನಲ್ಲಿ ಕಾಂಡೋಮ್ ಸಿಕ್ಕಿದೆ. ಇದು ಹೇಗೆ ಬಂತು? ಅಂತ ಶಿಕ್ಷಕರು ಕೇಳಿದಾಗ, "ಇದು ನನ್ನದಲ್ಲ, ಫ್ರೆಂಡ್‌ದು" ಎಂದು ಕುಂಟು ನೆಪ ಹೇಳಿದ್ದಾಳೆ. ಈ ವಿಷಯವನ್ನು ಕಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ದೃಢಪಡಿಸಿದ್ದಾರೆ.

ಸಮಸ್ಯೆಗೆ ಪರಿಹಾರ ಏನು?: ಕೆಲವು ಮಕ್ಕಳು ಇಂತಹ ಚಟುವಟಿಕೆಗಳನ್ನು ಗುಟ್ಟಾಗಿ ಮಾಡುತ್ತಿರುತ್ತಾರೆ. ಮಕ್ಕಳಿಗೆ ಗೊತ್ತಾಗದಂತೆ ಪಾಲಕರು ಆಗಾಗ ಮಕ್ಕಳ ಚಟುವಟಿಕೆಗಳನ್ನು ಗಮನಿಸುತ್ತಿರಬೇಕು. ಅಂಥದ್ದೇನಾದರೂ ಕಂಡುಬಂದರೆ, ಆ ಬಗ್ಗೆ ತಮ್ಮ ಮಕ್ಕಳೊಂದಿಗೆ ಕುಳಿತು ಮಾತನಾಡಬೇಕು. ಹಾಗೆ ಮಾಡಿದರೆ ಏನೇನು ಅಪಾಯ ಆಗುತ್ತದೆ ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕು ಎನ್ನುತ್ತಾರೆ ವೈದ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net