

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ವಿರುದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಎರಡು ಕೇಸ್ನಲ್ಲಿ ಅವರು ಅಪರಾಧಿ. ಒಂದು ಮುಡಾ ಸೈಟ್ ವಿಚಾರದಲ್ಲಿ ಸೈಟ್ ವಾಪಸ್ ಕೊಟ್ಟು ಸಿಲುಕಿಕೊಂಡಿದ್ದಾರೆ. ಇನ್ನೊಂದು ವಾಲ್ಮೀಕಿ ಹಗರಣ ಎಂದು ನೇರ ಆರೋಪ ಎಸಗಿದರು.
"ಇ.ಡಿ ಕೂಡ ವಾಲ್ಮೀಕಿ ಹಗರಣ ಸಂಬಂಧ ಹಣ ಚುನಾವಣೆಗೆ ಬಳಕೆಯಾಗಿರುವ ಬಗ್ಗೆ ಪ್ರೆಸ್ ರಿಲೀಸ್ ಮಾಡಿದೆ. ಜನರ ದುಡ್ಡನ್ನು ಚುನಾವಣೆ ಸಲುವಾಗಿ ಉಪಯೋಗ ಮಾಡಿದ್ದಾರೆ. ಅಧಿಕಾರಿಯ ಸೂಸೈಡ್ ಆಗಿದೆ, ಮಂತ್ರಿ ರಾಜೀನಾಮೆ ಕೊಟ್ಟಿದ್ದಾರೆ. ಇದರ ನೇರ ಹೊಣೆ ಸಿದ್ದರಾಮಯ್ಯ. ಇಲ್ಲಿ ಅವರೇ ಹಣಕಾಸು ಸಚಿವ, ಮುಖ್ಯಮಂತ್ರಿಯಾಗಿದ್ದಾರೆ. ನಮ್ಮ ದುಡ್ಡು ಆಂಧ್ರ, ಬಳ್ಳಾರಿ ಚುನಾವಣೆಗೆ ಹೋಗಿದೆ. ಇದನ್ನು ಇಡಿ ಹಾಗೂ ಬೇರೆ ಸಂಸ್ಥೆಗಳು ಕೂಡ ಹೇಳಿವೆ" ಎಂದರು.
"ಎರಡು ಕೇಸ್ನಲ್ಲಿ ಸಿದ್ದರಾಮಯ್ಯ ಅಪರಾಧಿ. ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ನೈತಿಕತೆ ಇಲ್ಲ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಲೋಕಾಯುಕ್ತವನ್ನೇ ತೆಗೆದುಹಾಕಿದ್ದರು. ಈ ಬಾರಿ ಕೂಡ ಪ್ರಭಾವ ಬೀರುತ್ತಿದ್ದಾರೆ ಎನಿಸುತ್ತಿದೆ. ಸೈಟ್ ವಾಪಸ್ ಮಾಡಿದ್ದು ಕಣ್ಮುಂದೆ ಇದೆ. ಅವರ ಕುಟುಂಬದವರೇ ಪತ್ರ ಬರೆದು ಸೈಟ್ ವಾಪಸ್ ಕೊಟ್ಟಿದ್ದಾರೆ, ಇದು ಯಾರ ತಪ್ಪು?" ಎಂದು ಪ್ರಶ್ನಿಸಿದ್ದಾರೆ.
"ಸಿದ್ದರಾಮಯ್ಯನವರು 1992ರಿಂದಲೂ ಒಂದಲ್ಲ ಒಂದು ಸಂವಿಧಾನಿಕ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ಇವರಿಗೆ ಗೊತ್ತಿಲ್ಲದೇ ಈ ರೀತಿ ಆಗಿದೆ ಅನ್ನೋದನ್ನು ಊಹೆ ಮಾಡಲು ಆಗೋದಿಲ್ಲ. ಹಾಗೇ ಆಗಿದ್ರೆ ರಾಜಕೀಯದಲ್ಲಿ ಇರಲು ಇವರು ಲಾಯಕ್ಕಲ್ಲ" ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.