ರತನ್ ಟಾಟಾಗೆ ಅಂತಿಮ ನಮನ ಸಲ್ಲಿಸಿದ ನೆಚ್ಚಿನ ಶ್ವಾನ; ಕಣ್ಣಂಚಲಿ ನೀರು ತರಿಸುವಂತಿದೆ ಈ ವಿಡಿಯೋ | Goa Dog

goa
Published on

ನವದೆಹಲಿ: ಭಾರತದ ಹೆಸರಾಂತ ಕೈಗಾರಿಕೋದ್ಯಮಿ, ಲೋಕೋಪಕಾರಿ ಮತ್ತು ಶ್ವಾನ ಪ್ರೇಮಿ ರತನ್ ಟಾಟಾ (86) ಅವರು ನಿನ್ನೆ ತಡರಾತ್ರಿ ವಯೋಸಹಜ ಖಾಯಿಲೆಯಿಂದ ಕೊನೆಯುಸಿರೆಳೆದರು. ದೇಶದ ಉದ್ಯಮ ಜಗತ್ತಿಗೆ ಹೊಸ ರೂಪ ತಂದುಕೊಟ್ಟ ಟಾಟಾ (Ratan Tata) ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಭಾರತೀಯರು ಕಂಬನಿ ಮಿಡಿದಿದ್ದಾರೆ. ಉದ್ಯಮ ಲೋಕದ ಅದ್ಭುತ ಶಕ್ತಿ ಇನ್ನು ಮುಂದೆ ನಮಗೆ ಕಾಣಿಸುವುದಿಲ್ಲ ಎಂಬ ಕೊರಗು ಪ್ರತಿಯೊಬ್ಬರಲ್ಲೂ ಕಾಡುತ್ತಿರುವುದು ಅಕ್ಷರಶಃ ಸತ್ಯ. ಶೋಕದ ಕಗ್ಗತ್ತಲಿನಲ್ಲಿರುವ ಟಾಟಾ ಅವರ ಕುಟುಂಬಸ್ಥರ ಮಧ್ಯೆ ಅವರು ಸಾಕಿದ್ದ ಪ್ರೀತಿಯ ಶ್ವಾನವೊಂದು (Goa dog) ಭಾವಪೂರ್ಣ ವಿದಾಯ ತಿಳಿಸುತ್ತಿರುವ ದೃಶ್ಯ ಮನಕಲಕುವಂತಿದೆ.

ಉದ್ಯಮ, ರಾಜಕೀಯ, ಭಾರತೀಯ ಚಿತ್ರರಂಗ ಸೇರಿದಂತೆ ಇತರೆ ಕ್ಷೇತ್ರಗಳ ಗಣ್ಯರು ರತನ್ ಟಾಟಾ ಅವರ ಸಾವಿನ ಸುದ್ದಿಗೆ ಸಂತಾಪ ಸೂಚಿಸಿದ್ದಾರೆ. ಈ ಹಿಂದಿನಿಂದಲೂ ಟಾಟಾ ಅವರಿಗೆ ಪ್ರಾಣಿಗಳು ಎಂದರೆ ಎಲ್ಲಿಲ್ಲದ ಪ್ರೀತಿ ಎಂಬುದು ಅವರನ್ನು ಬಹಳ ಹತ್ತಿರದಿಂದ ಬಲ್ಲವರಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಕೂಡ ಹರಿದಾಡುತ್ತಿತ್ತು. ತಮ್ಮ ನಿವಾಸದ ಸುತ್ತಮುತ್ತವಿದ್ದ ಬೀದಿ ನಾಯಿಗಳಿಗೆ ಆಹಾರ ನೀಡಿ, ಪ್ರೀತಿ ಹಂಚುತ್ತಿದ್ದ ಅವರು, 'ಗೋವಾ' ಹೆಸರಿನ ಶ್ವಾನದ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು. ಗೋವಾ ಕಂಡರೆ ಅವರಿಗೆ ಅಚ್ಚುಮೆಚ್ಚು. ಗೋವಾಗೂ ಸಹ ಟಾಟಾ ಅವರೆಂದರೆ ಅಷ್ಟೇ ಪ್ರೀತಿ.

ಇಲ್ಲಿದೆ ನೋಡಿ ವಿಡಿಯೋ

ಭಾವಪೂರ್ಣ ವಿದಾಯ

ರತನ್ ಟಾಟಾ ಅವರ ಬರುವಿಕೆಗೆ ಸದಾ ಕಾಯುತ್ತಿದ್ದ 'ಗೋವಾ', ಇಂದು ಅವರ ಇರುವಿಕೆ ಇಲ್ಲದೆ ಕಂಗಾಲಾಗಿದೆ. ರತನ್ ಟಾಟಾ ಅವರ ಅಂತ್ಯಕ್ರಿಯೆಗೆ ಆಗಮಿಸಿದ ಗೋವಾ ಶ್ವಾನ, ಅವರಿದ್ದ ಶವಪೆಟ್ಟಿಗೆ ಮೇಲೆ ಕುಳಿತು ಅಂತಿಮ ನಮನ ತಿಳಿಸಿದೆ. ಈ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡಿದ್ದು, ನೋಡುಗರ ಕಣ್ಣಂಚಲಿ ನೀರು ತರಿಸಿದೆ. ಇಡೀ ದೇಶವೇ ರತನ್ ಟಾಟಾ ಅವರ ಸೇವೆಯನ್ನು ಸ್ಮರಿಸಿ, ಅವರು ಕೊಟ್ಟ ಕೊಡುಗೆಗಳನ್ನು ಗೌರವಿಸುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net