

ನವದೆಹಲಿ : ಕಾಶ್ಮೀರವನ್ನು ವಶಪಡಿಸಿಕೊಳ್ಳುವ ಪಾಕಿಸ್ತಾನೀಯರ ಇರಾದೆ ಮತ್ತೊಮ್ಮೆ ಬಹಿರಂಗವಾಗಿದೆ. ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರ ಹೇಳಿಕೆಯ ವಿಡಿಯೋ ಒಂದು ಜಗತ್ತಿನ ಗಮನ ಸೆಳೆದಿದೆ. ಘಝ್ವಾ ಏ ಹಿಂದ್ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಅಖ್ತರ್, ಮೊದಲು ಕಾಶ್ಮೀರವನ್ನು ವಶಪಡಿಸ್ತೇವೆ ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಎಂದು ಬಹಿರಂಗವಾಗಿಯೆ ಘೋಷಿಸಿದ್ದಾರೆ. ಘಝ್ವಾ ಏ ಹಿಂದ್ ಅಂದರೆ ಭಾರತದ ವಿರುದ್ಧ ಧರ್ಮಯುದ್ಧ ಎಂದು ಅರ್ಥ.
ಸಮಾ ಟಿವಿ ಚಾನೆಲ್ಗೆ ರಾವಲ್ಪಿಂಡಿ ಎಕ್ಸ್ಪ್ರೆಸ್ ಎಂದೇ ಖ್ಯಾತರಾಗಿರುವ ಅಖ್ತರ್ ಹಿಂದೊಮ್ಮೆ ನೀಡಿದ್ದ ಸಂದರ್ಶನ ತುಣುಕು ವಿಡಿಯೋ ದೃಶ್ಯದಲ್ಲಿರುವಂಥದ್ದು. ಇದು ವೈರಲ್ ಆಗಿದ್ದು, ಅಖ್ತರ್ ಹೇಳಿರುವುದಿಷ್ಟು -
ಶಮಲ್ ಮಶ್ರಿಕ್ (ಅರೇಬಿಯನ್ ಪೆನಿನ್ಸುಲಾದಿಂದ ಉತ್ತರಕ್ಕೆ ಇರುವ ಪ್ರದೇಶವಾಗಿದ್ದು, ಉರ್ದು ಭಾಷೆಯಲ್ಲಿರುವ ಉಲ್ಲೇಖವಾಗಿದೆ) ನಿಂದ ಸಶಕ್ತ ಸೇನೆ ಉದಯಿಸಲಿದೆ. ಉಜ್ಬೇಕಿಸ್ತಾನ್ನಿಂದಲೂ ವಿವಿಧ ಶಕ್ತಿಗಳು ನಮ್ಮೊಡನೆ ಕೈ ಜೋಡಿಸಲಿವೆ. ಇವೆಲ್ಲವೂ ಖೊರಾಸಾನ್ ಅನ್ನು ಉಲ್ಲೇಖಿಸುತ್ತಿದ್ದು, ಐತಿಹಾಸಿಕ ಪ್ರದೇಶ ಲಾಹೋರ್ ತನಕ ವಿಸ್ತರಿಸಲ್ಪಡಲಿದೆ. ನಮ್ಮ ಸೇನೆ ಅಫ್ಘಾನಿಸ್ತಾನದಿಂದ ಅಟಾಕ್ ತನಕ ತಲುಪಲಿದ್ದು, ಅಟಾಕ್ನಲ್ಲಿರುವ ನದಿಯಲ್ಲಿ ಎರಡು ಬಾರಿ ರಕ್ತ ಪ್ರವಾಹವೇ ಹರಿಯಲಿದೆ. ಘಝ್ವಾ ಏ ಹಿಂದ್ ನಡೆಯಲಿದೆ ಎಂದು ನಮ್ಮ ಗ್ರಂಥಗಳಲ್ಲಿ ಬರೆದಿದೆ.
ಘಝ್ವಾ-ಏ-ಹಿಂದ್ ಪದವನ್ನು ಮೂಲಭೂತವಾದಿ ಇಸ್ಲಾಮಿಕ್ ಧರ್ಮ ಬೋಧಕರು ಪಾಕಿಸ್ತಾನದಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳೂ ಬಳಸುತ್ತಿವೆ. ಈ ಪರಿಕಲ್ಪನೆಯ ಪ್ರಕಾರ, ಸಿರಿಯಾದಿಂದ ಈ ಯುದ್ಧ ಆರಂಭವಾಗಿ ಕಪ್ಪು ಬಾವುಟ ಹಿಡಿದ ಶಕ್ತಿ ಭಾರತವನ್ನು ಅತಿಕ್ರಮಿಸಲಿದೆ. ಇಸ್ಲಾಮಿಕ್ ಸ್ಟೇಟ್ ಸ್ಥಾಪಿಸುವ ಉದ್ದೇಶದ ಈ ಯುದ್ಧಕ್ಕೆ ಪೂರಕವಾಗಿ ಆಗ ಹಿಂದು ಮತ್ತು ಮುಸಲ್ಮಾನರ ನಡುವೆ ಭೀಕರ ಹೊಡೆದಾಟ ನಡೆಯಲಿದೆ. ಇದರಲ್ಲಿ ಮುಸ್ಲಿಮರಿಗೆ ಭಾರತದಲ್ಲಿರುವ ಹಿಂದುಗಳ ವಿರುದ್ಧ ನಿರ್ಣಾಯಕ ಗೆಲುವು ಸಿಗಲಿದೆ. ಭಾರತದಲ್ಲಿ ಉಗ್ರಕೃತ್ಯಗಳಿಗೆ ಉಗ್ರರನ್ನು ನಿಯೋಜಿಸುವಾಗ ಜೈಷ್ ಏ ಮೊಹಮ್ಮದ್ (ಜೆಇಎಂ) ನಿರಂತರವಾಗಿ ಇದನ್ನೇ ಬೋಧಿಸಿ, ಅವರನ್ನು ಪ್ರಚೋದಿಸುತ್ತಿದೆ.
ಅಖ್ತರ್ಗೆ ಭಾರಿ ಸಂಖ್ಯೆಯ ಫಾಲೋಯರ್ಸ್ ಇದ್ದು, ಅವರ ಈ ಪೋಸ್ಟ್ ವ್ಯಾಪಕ ವಿವಾದ ಸೃಷ್ಟಿಸಿದೆ. ಪರ - ವಿರೋಧದ ಟೀಕೆಗಳು ವ್ಯಕ್ತವಾಗಿವೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..